ತಿರುವನಂತಪುರಂ(ಕೇರಳ): ಜನರು ವಿವಿಧ ರೀತಿಯ ದೂರುಗಳು ಮತ್ತು ಸಮಸ್ಯೆಗಳೊಂದಿಗೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುತ್ತಾರೆ. ಆದರೆ ತಿರುವನಂತಪುರಂನ ಪಾಲೋಡೆ ಎಂಬಲ್ಲಿ ವಾಸಿಸುವ ಮಹಿಳೆ ನೆರವನ್ನು ಕೋರಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದರು.
ಅಸಹಾಯಕ ಸ್ಥಿತಿಯಲ್ಲಿರುದ್ದ ಶಶಿಕಲಾ ಎಂಬ ಮಹಿಳೆ 2 ಸಾವಿರ ರೂಪಾಯಿ ಸಾಲ ನೀಡುವಂತೆ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಳು. ಸಬ್ಇನ್ಸ್ಪೆಕ್ಟರ್ಗೆ ಮಲಯಾಳಂನಲ್ಲಿ ಪತ್ರ ಬರೆದಿದ್ದ ಮಹಿಳೆ ಸಾಲಕ್ಕಾಗಿ ಮನವಿ ಮಾಡಿದ್ದರು.
ನಾವು ಪೆರಿಂಗಮಾಲಾದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನನ್ನ ಇಬ್ಬರು ಹೆಣ್ಣುಮಕ್ಕಳು ಓದುತ್ತಿದ್ದಾರೆ. ಶಾಲೆಯಿಂದ ಹಿರಿಯ ಮಗಳ ಟಿ.ಸಿ ಸಂಗ್ರಹಿಸಲು ಕೂಡ ನಮಗೆ ಹಣದ ಕೊರತೆಯಿದೆ. ದಯವಿಟ್ಟು 2,000 ರೂ. ಸಾಲ ನೀಡಿ. ನಾನು ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕೋರಿದ್ದರು.
ಪತ್ರ ಓದಿದ ಸಬ್ಇನ್ಸ್ಪೆಕ್ಟ್ ಸತೀಶ್ ಕುಮಾರ್ ಅವರು ಮಹಿಳೆಯುನ್ನು ಠಾಣೆಗೆ ಕರೆಸಿ 2 ಸಾವಿರ ರೂ. ನೀಡಿದ್ದಾರೆ. ಮಹಿಳೆ ಬಗ್ಗೆ ವಿಚಾರಿಸಿದಾಗ ಆಕೆ ಗಂಡನ ಕುಟುಂಬವನ್ನು ತ್ಯಜಿಸಿ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಕೆಲ ದಿನಗಳಿಂದ ಮಕ್ಕಳು ಏನನ್ನೂ ತಿಂದಿಲ್ಲ ಅನ್ನೋದು ತಿಳಿದುಬಂದಿದೆ. ತಕ್ಷಣ ಮಹಿಳೆಯ ನೆರವಿಗೆ ಧಾವಿಸಿದ ಠಾಣಾ ಸಿಬ್ಬಂದಿ, ಶಶಿಕಲಾ ಕೇಳಿದ ಹಣವನ್ನು ಕೊಡುವುದರ ಜೊತೆಗೆ, ಕುಟುಂಬಕ್ಕೆ ಒಂದು ತಿಂಗಳ ಕಾಲ ಆಗುವಷ್ಟು ಆಹಾರ ಸಾಮಗ್ರಿಗಳನ್ನು ಮನೆಗೆ ಕಳುಹಿಸಿದ್ದಾರೆ.
ಸ್ಥಳೀಯರು ಯಾರೂ ಕೂಡ ಮಹಿಳೆಗೆ ಪರಿಚಯ ಇರಲಿಲ್ಲ. ಹೀಗಾಗಿ ಪೊಲೀಸರಿಗೆ ಪತ್ರ ಬರೆದು ಶಶಿಕಲಾ ಸಹಾಯ ಕೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕಲಾ, ಪೊಲೀಸರ ಮೇಲೆ ತಾನು ಹೊಂದಿದ್ದ ನಂಬಿಕೆ ಮತ್ತು ಗೌರವವೇ ಸಹಾಯ ಕೇಳುವಂತೆ ಮಾಡಿತು ಎಂದಿದ್ದಾರೆ.