ತಿರುವನಂತಪುರಂ(ಕೇರಳ): ಚೀನಾದಲ್ಲಿ ಮಾರಕವಾಗಿ ಕಾಡುತ್ತಿರುವ ಕರೋನಾ ವೈರಸ್ ಈಗಾಗಲೇ ನೂರಾರು ಜನರನ್ನು ಆಹುತಿ ಪಡೆದುಕೊಂಡಿದೆ. ಇದೀಗ ಮಹಾಮಾರಿ ದೇಶದಲ್ಲೂ ಕಾಲಿಟ್ಟಿದ್ದು, ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿರುವ ಕೇರಳ ವಿದ್ಯಾರ್ಥಿ ದೇಹದಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ.
ಸದ್ಯ ವಿದ್ಯಾರ್ಥಿಗೆ ತ್ರಿಶೂರ್ದಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ. ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ರಕ್ತದಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ ಎಂದು ಕೇರಳ ವೈದ್ಯರು ಸಹ ಮಾಹಿತಿ ನೀಡಿದ್ದಾರೆ. ಇದರ ಜತೆಗೆ ವಿದ್ಯಾರ್ಥಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ತಿಳಿದು ಬಂದಿಲ್ಲ.
ಮಹಾಮಾರಿ ಕರೋನಾಗೆ ಈಗಾಗಲೇ ಚೀನಾದಲ್ಲಿ 200ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದು, ದೇಶದಲ್ಲಿ ಈ ಸೋಂಕಿನ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ. ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ.