ತಿರುವನಂತಪುರಂ: ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ಈಗಾಗಲೇ ಇದ್ದ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಆದರೂ ರಾಜ್ಯ ಇನ್ನೂ ಕೋವಿಡ್ ಮುಕ್ತವಾಗಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ನಾವು ನಮ್ಮ ರಾಜ್ಯದ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದೇವೆ. ಕಳೆದ ಕೆಲ ದಿನಗಳ ಅಂಕಿ -ಅಂಶಗಳೂ ಅದಕ್ಕೆ ಪೂರಕವಾಗಿವೆ. ಆದರೂ ನಾವು ಸೋಂಕಿನಿಂದ ಸಂಪೂರ್ಣ ಮುಕ್ತಿ ಪಡೆದಿದ್ದೇವೆ ಎಂದು ಹೇಳುವುದು ಅಸಾಧ್ಯ. ಯಾಕೆಂದರೆ ನೆರೆಯ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ಸಾಂಕ್ರಾಮಿಕವಾದ್ದರಿಂದ ರಾಜ್ಯಕ್ಕೆ ಹರಡುವ ಸಾಧ್ಯತೆ ಇದೆ ಎಂದು ಸಚಿವೆ ತಿಳಿಸಿದ್ದಾರೆ.
ಈಗಾಗಲೇ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 1173ಕ್ಕೇರಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 247 ಇದೆ. ಇದರಲ್ಲಿ 60 ಜನ ಗುಣಮುಖರಾಗಿದ್ದರೂ, ಹೊಸ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ರಾಜ್ಯ ಕೊರೊನಾ ಸೋಂಕಿನಿಂದ ಮುಕ್ತಿ ಪಡೆದಿದೆ ಎಂದು ಹೇಳುವುದು ಕಷ್ಟ ಎಂದು ಸಚಿವೆ ತಿಳಿಸಿದ್ದಾರೆ.