ನವದೆಹಲಿ: ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹೀಗಾಗಿ, ರಾಜ್ಯದಲ್ಲಿ 'ಜಂಗಲ್ ರಾಜ್' ಸೃಷ್ಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬುಲಂದ್ಶಹರ್ನ ವಕೀಲ ಧರ್ಮೇಂದ್ರ ಚೌಧರಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದಾರೆ. ತನಿಖೆಯನ್ನು ಸರ್ಕಾರ ಮೂಲೆಗುಂಪು ಮಾಡಿದೆ. ಜುಲೈ 25ರಂದು ನಾಪತ್ತೆಯಾದ ವಕೀಲರ ಮೃತದೇಹ ಜುಲೈ 31ರಂದು ನಗರದಲ್ಲಿ ಪತ್ತೆಯಾಗಿದೆ. ಅದಾಗಲೇ ಅವರನ್ನು ಸಮಾಧಿ ಮಾಡಲಾಗಿತ್ತು ಎಂದು ದೂರಿದ್ದಾರೆ.
ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ಸೃಷ್ಟಿಯಾಗುತ್ತಿದೆ. ಅಪರಾಧ ಮತ್ತು ಕೊರೊನಾ ನಿಯಂತ್ರಣಕ್ಕೆ ಸಿಗದೇ ಬಹು ದೂರ ಸಾಗುತ್ತಿದೆ. ಧರ್ಮೇಂದ್ರ ಚೌಧರಿನ್ನು ಎಂಟು ದಿನಗಳ ಹಿಂದೆ ಬುಲಂದ್‌ಶಹರ್‌ನಲ್ಲಿ ಅಪಹರಿಸಲಾಗಿತ್ತು. ಅವರ ಶವ ನಿನ್ನೆ ಪತ್ತೆಯಾಗಿದೆ. ಕಾನ್ಪುರ್, ಗೋರಖ್‌ಪುರ ಮತ್ತು ಬುಲಂದ್‌ಶಹರ್... ಹೀಗೆ ಪ್ರತಿಯೊಂದು ಘಟನೆಯಲ್ಲೂ ತನಿಖೆ ನಿಧಾನಗತಿಯಿಂದ ಸಾಗುತ್ತಿದೆ. ಇದನ್ನು ನೋಡಿದರೆ ಸರ್ಕಾರ ಇನ್ನೂ ಎಷ್ಟು ದಿನಗಳ ಕಾಲ ನಿದ್ರೆ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.