ಅಮರಾವತಿ (ಆಂಧ್ರ ಪ್ರದೇಶ): ಪರಿಶಿಷ್ಟ ಜಾತಿಯ ಯುವಕ ವರ ಪ್ರಸಾದ್ ತನಗೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ನಕ್ಸಲಿಸಂ ಸೇರಲು ಅನುಮತಿ ಕೊಡುವಂತೆ ರಾಷ್ಟ್ರಪತಿಗೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಆಂಧ್ರಪ್ರದೇಶ ಸಮಾಜ ಕಲ್ಯಾಣ ಇಲಾಖೆಯ ಸಚಿವರು ವಿವಾದಿತ ಹೇಳಿಕೆ ನೀಡಿದ್ದಾರೆ.
ನಕ್ಸಲಿಸಂ ಸೇರುವ ಕುರಿತು ರಾಷ್ಟ್ರಪತಿಗೆ ಯುವಕ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ಸಮಾಜ ಕಲ್ಯಾಣ ಸಚಿವ ಪಿನಿಪ್ ಸ್ವರೂಪ್ ಅವರು, ನೀನು (ಯುವಕ) ನಕ್ಸಲ್ ಸೇರಲು ಬಯಸಿದ್ರೆ ಸೇರು, ಅದಕ್ಕೆ ರಾಷ್ಟ್ರಪತಿಗಳ ಅನುಮತಿ ಅವಶ್ಯಕವಿಲ್ಲ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ರಾಜಮಂಡ್ರಿಯ ವೇಡುಲ್ಲಪಲ್ಲೆ ಎಂಬ ಗ್ರಾಮದ ವರಪ್ರಸಾದ್, ರಾಷ್ಟ್ರಪತಿಗೆ ಪತ್ರ ಬರೆದಿರುವುದು ಸುದ್ದಿಯಲಿದೆ. ವೈಎಸ್ಆರ್ಸಿಪಿ ನಾಯಕನ ಮರಳು ಲಾರಿಗಳನ್ನು ಮುನಿ ಕುಡಲಿ ಎಂಬ ಪ್ರದೇಶದಲ್ಲಿ ತಡೆದಿದ್ದನು. ನಂತರ ಯುವಕನನ್ನು ಜುಲೈ 20ರಂದು ವಿಚಾರಣೆ ಹೆಸರಲ್ಲಿ ಸೀತಾನಗರಂ ಪೊಲೀಸ್ ಠಾಣೆಗೆ ಕರೆದು ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣ ಸಂಬಂಧ ಈಗಾಗಲೇ ಡಿಜಿಪಿ ಅವರು ತನಿಖೆ ಕೈಗೊಂಡಿದ್ದು, ಓರ್ವ ಸಬ್ಇನ್ಸ್ಪೆಕ್ಟರ್ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿದ್ದಾರೆ. ಹಾಗೆಯೇ ಜುಲೈ 22ರಂದು ಸಿಎಂ ಜಗನ್ ಮೋಹನ್ ರೆಡ್ಡಿ ಅವರು ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಹೆಚ್ಚಿನ ಮಾಹಿತಿ ಕೇಳಿದ್ದರು.