ನವದೆಹಲಿ: ಜೆಎನ್ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ, ಗುಂಪೊಂದು ಹಲ್ಲೆ ನಡೆಸಿದ್ದು, ದೇಶಾದ್ಯಂತ ಈ ಕೃತ್ಯ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇಂದು ಜೆಎನ್ಯು ಉಪ ಕುಲಪತಿ ಜಗದೀಶ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಇಂದು ಈ ಬಗ್ಗೆ ಚರ್ಚೆ ನಡೆಸಿದರು.
ಜೆಎನ್ಯು ವಿಶ್ವದ್ಯಾಲಯದ ಆವರಣದಲ್ಲಿ ಇಂದು ವಿದ್ಯಾರ್ಥಿಗಳೊಂದಿಗೆ ಜಗದೀಶ್ ಕುಮಾರ್ ಸಮಾಲೋಚನೆ ನಡೆಸಿದ್ದು, ವಿವಿ ಆವರಣದೊಳಗಿನ ವಿದ್ಯಾರ್ಥಿಗಳ ಸಮಸ್ಯೆ, ಗಲಭೆಗೆ ಕಾರಣವಾದ ಅಂಶಗಳು ಹಾಗೂ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ವಿದ್ಯಾರ್ಥಿಗಳು ಸಹ ಉಪ ಕುಲಪತಿಗಳಿಗೆ, ವಿದ್ಯಾರ್ಥಿ ನಿಲಯ ಹಾಗೂ ವಿವಿ ಒಳಗಿನ ಭಾಗದಲ್ಲಿ ನಡೆಯುವ ಘಟನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಇನ್ನು ಈ ಸಭೆಯ ನಂತರ ಉಪಕುಲಪತಿ ಜಗದೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, ವಿವಿಯ ವಿದ್ಯಾರ್ಥಿನಿಲಯಗಳಲ್ಲಿ ಕಾನೂನು ಬಾಹಿರವಾಗಿ ಹೊರಗಿನವರು ನಮ್ಮ ವಿದ್ಯಾರ್ಥಿಗಳೊಂದಿಗೆ ತಂಗುತ್ತಿದ್ದು, ಅವರು ಸಹ ಈ ಘರ್ಷಣೆಗಳಲ್ಲಿ ಭಾಗಿಯಾಗಿ ವಿವಿಯಲ್ಲಿ ಹಿಂಸಾಚಾರ ಉಂಟಾಗಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಇಲ್ಲಿ ಏನಾದರೇನು, ಅವರಿಗೆ ಏನು ಸಮಸ್ಯೆಯಿಲ್ಲ. ಇಲ್ಲಿ ನಡೆದ ಹಲವಾರು ಕೃತ್ಯಗಳಿಗೆ ಇಂಥವರೇ ಕಾರಣರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.