ತೆಲಂಗಾಣ: ಬೇರೆ ಯುವಕನೊಂದಿಗೆ ಮದುವೆಯಾಗಲು ಹೊರಟ 25 ವರ್ಷದ ಯುವತಿಯನ್ನು ಪ್ರಿಯತಮನೇ ಕೊಲೆ ಮಾಡಿದ್ದ ತೆಲಂಗಾಣ ಪ್ರಕರಣ ಸಂಬಂಧ, ಆರೋಪಿ ತಾನಾಗಿಯೇ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಇನ್ನು ಆರೋಪಿಯು ಕೊಲೆ ಮಾಡುವುದಕ್ಕೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಆರೋಪಿಯು 2016 ರಲ್ಲಿ ಪದವಿ ಮುಗಿಸಿದ್ದ ಖಾಸಗಿ ಕಾಲೇಜಿನಲ್ಲಿ ಯುವತಿಯ ಪರಿಚಯವಾಗಿದ್ದು, ಪರಿಚಯ ಪ್ರೇಮವಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಸಲುವಾಗಿ ಕಾಲೇಜಿಗೆ ಸಮೀಪದಲ್ಲೇ ಆರು ತಿಂಗಳ ಹಿಂದೆ ರೂಂ ಬಾಡಿಗೆ ತೆಗೆದುಕೊಂಡು ಯುವಕ ವಾಸವಾಗಿದ್ದನು. ಪ್ರಿಯತಮನನ್ನು ಭೇಟಿ ಮಾಡಲು ಯುವತಿ ಇಲ್ಲಿಗೆ ಬರುತ್ತಿದ್ದಳು. ಆದರೆ ಯುವತಿಗೆ ಅದೇ ನಗರದಲ್ಲಿದ್ದ ಇನ್ನೊಬ್ಬ ಯುವಕನ ಮೇಲೆ ಪ್ರೇಮವಾಗಿದೆ. ಆಕೆಯ ನಡವಳಿಕೆ ಮೇಲೆ ಸಂಶಯ ಮೂಡಿದ್ದು, ಆಕೆ ತನ್ನ ಹೊಸ ಪ್ರಿಯತಮನಿಗೆ ಕಳುಹಿಸುತ್ತಿದ್ದ ಮೆಸೇಜ್ಗಳನ್ನು ಎರಡು ದಿನಗಳ ಹಿಂದೆ ಯುವಕ ನೋಡಿದ್ದಾನೆ.
ಈ ಕುರಿತು ಆಕೆಯನ್ನು ಪ್ರಶ್ನಿಸಿದ್ದಕ್ಕೆ, ತಾನು ಬೇರೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆ ಮಾಡಿಕೊಳ್ಳುವುದಾಗಿ ಯುವತಿ ತಿಳಿಸಿದ್ದಾಳೆ. ಇದರಿಂದ ಮನನೊಂದ ಯುವಕ ಆಕ್ರೋಶಗೊಂಡಿದ್ದುಮ ಆಕೆಯನ್ನ ಸಾಯಿಸಲು ನಿರ್ಧರಿಸಿದ್ದಾನೆ. ಶುಕ್ರವಾರದಂದು ಆಕೆಯೊಂದಿಗೆ ಮಾತನಾಡಬೇಕೆಂದು ಹೇಳಿ ತನ್ನ ರೂಂಗೆ ಕರೆದೊಯ್ದಿದ್ದು, ಅಲ್ಲಿ ಅವರಿಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಯುವಕನು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬ್ಲೇಡ್‌ನಿಂದ ಹಲ್ಲೆ ಮಾಡಿ, ಅವಳ ಗಂಟಲನ್ನು ಸೀಳಿ ಕೊಲೆ ಮಾಡಿದ್ದಾನೆ.
ಇದೀಗ ಆರೋಪಿಯು ತಾನಾಗಿಯೇ ಬಂದು ಪೊಲೀಸರ ಮುಂದೆ ಶರಣಾಗಿದ್ದು, ಬಳಿಕ ಆತನನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.