ಮುಂಬೈ : ಆಸ್ಕರ್ ಪ್ರಶಸ್ತಿ ವಿಜೇತೆ, ಕಾಸ್ಟೂಮ್ ಡಿಸೈನರ್ ಭಾನು ಅಥೈಯ್ಯ ಅವರು ಇಹಲೋಕ ತ್ಯಜಿಸಿದ್ದಾರೆ. ಮಲಗಿದ್ದಲ್ಲೇ ಗುರುವಾರ ಕೊನೆಯುಸಿರೆಳೆದರು ಎಂದು ಅವರ ಮಗಳು ರಾಧಿಕಾ ಗುಪ್ತಾ ಮಾಹಿತಿ ನೀಡಿದ್ದಾರೆ.
ವಸ್ತ್ರ ವಿನ್ಯಾಸಕ್ಕೆ ಆಸ್ಕರ್...
91 ವರ್ಷದ ಭಾನು ಅಥೈಯ್ಯಾ ಒಬ್ಬ ಮಗಳನ್ನು ಅಗಲಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಆಸ್ಕರ್ ಸೇರಿ ಹಲವು ಪ್ರಮುಖ ಪ್ರಶಸ್ತಿಗಳನ್ನ ಅವರು ಗೆದ್ದ ಸಾಧನೆ ಮಾಡಿದ್ದಾರೆ. 1983ರಲ್ಲಿ ರಿಚರ್ಡ್ ಆಟನ್ಬರೋ ನಟನೆಯ ‘ಗಾಂಧಿ’ ಸಿನಿಮಾದಲ್ಲಿ ಅವರ ವಸ್ತ್ರ ವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
ಅಥೈಯ್ಯಾರಿಗೆ ಬ್ರೈನ್ ಟ್ಯೂಮರ್...!
ಭಾನು ಅಥೈಯ್ಯಾರಿಗೆ ಬ್ರೈನ್ ಟ್ಯೂಮರ್ ಇರುವುದು ಎಂಟು ವರ್ಷಗಳ ಹಿಂದೆ ತಿಳಿದುಬಂದಿತ್ತು. ನಿನ್ನೆ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಚಂದನವಾಡಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಗುರುವಾರ ನಡೆದಿದೆ.
ಚಿತ್ರರಂಗಕ್ಕೆ ಎಂಟ್ರಿ...
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 1929, ಏಪ್ರಿಲ್ 28ರಂದು ಜನಿಸಿದ್ದ ಭಾನು ಅಥೈಯ್ಯಾ 1956ರಲ್ಲಿ ಸಿಐಡಿ ಎಂಬ ಹಿಂದಿ ಸಿನಿಮಾಗೆ ಕಾಸ್ಟೂಮ್ ಡಿಸೈನ್ ಮಾಡುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಸಿನಿ ಪ್ರಯಾಣ...
ಭಾನು ಅಥೈಯ್ಯಾ ಸಿನಿ ಪ್ರಯಾಣದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 1983ರಲ್ಲಿ ಗಾಂಧಿ ಸಿನಿಮಾದ ಅವರ ಕಾಸ್ಟೂಮ್ ವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅದೇ ವರ್ಷ ಅವರು ಬಾಫ್ತಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಸ್ವದೇಶ್ ಚಿತ್ರವೇ ಲಾಸ್ಟ್...
ಲಗಾನ್ ಸಿನಿಮಾಕ್ಕೂ ಅವರು ವಸ್ತ್ರ ವಿನ್ಯಾಸ ಮಾಡಿದ್ದರು. ಆ ಚಿತ್ರದ ಕೆಲಸಕ್ಕೂ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು. 2009ರಲ್ಲಿ ಫಿಲಂ ಫೇರ್ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್ ಲಭಿಸಿದೆ. 2004ರಲ್ಲಿ ಶಾರುಖ್ ಖಾನ್ ಅಭಿನಯದ ಸ್ವದೇಶ್ ಚಿತ್ರ ಅವರ ಕೊನೆಯ ಕೆಲಸವಾಗಿತ್ತು.