ನವದೆಹಲಿ : ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ಪೂರೈಕೆ ಸರಪಳಿಯನ್ನು ಬಲಪಡಿಸುವ ಸಲುವಾಗಿ ಭಾರತೀಯ ರೈಲ್ವೆ ಕಳೆದ ಎರಡು ವಾರಗಳಲ್ಲಿ 6.75 ಲಕ್ಷ ವ್ಯಾಗನ್ ಸರಕುಗಳನ್ನು ಸಾಗಿಸಿದೆ.
ಅಧಿಕೃತ ಹೇಳಿಕೆಯ ಪ್ರಕಾರ, ಈ 6.7 ಲಕ್ಷ ವ್ಯಾಗನ್‌ಗಳಲ್ಲಿ ಆಹಾರ ಧಾನ್ಯಗಳು, ಉಪ್ಪು, ಸಕ್ಕರೆ, ಖಾದ್ಯ ತೈಲ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳಂತಹ 4.50 ಲಕ್ಷ ವ್ಯಾಗನ್‌ಗಳು ಸೇರಿವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರೈಲ್ವೆ ಒಟ್ಟು 2,58,503 ವ್ಯಾಗನ್‌ಗಳ ಸರಕುಗಳ ಪೈಕಿ 1,55,512 ವ್ಯಾಗನ್‌ಗಳು ಅಗತ್ಯ ವಸ್ತುಗಳನ್ನು ಒಳಗೊಂಡಿವೆ. ಇದರಲ್ಲಿ 21,247 ವ್ಯಾಗನ್ ಆಹಾರ ಧಾನ್ಯ, 11,336 ವ್ಯಾಗನ್ ಗೊಬ್ಬರ, 1,24,759 ವ್ಯಾಗನ್ ಕಲ್ಲಿದ್ದಲು ಮತ್ತು 7,665 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳನ್ನ ಸಾಗಿಸಿ ಸೈ ಎನಿಸಿಕೊಂಡಿದೆ.
ಲಾಕ್‌ಡೌನ್ ಮಧ್ಯೆ, ರೈಲ್ವೆ ಭಾರತದ ಆಹಾರ ನಿಗಮದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಮಾರ್ಚ್ 24 ರಿಂದ ದೇಶಾದ್ಯಂತ 800 ಕ್ಕೂ ಹೆಚ್ಚು ರೇಕ್‌ಗಳಲ್ಲಿ 20 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಾಗಿಸಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ವಿನಾಯಿತಿ ಮತ್ತು ವಿಶ್ರಾಂತಿಗಾಗಿ ಅನುಮತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ರೈಲ್ವೆ ಕೃಷಿ, ರಾಸಾಯನಿಕ ಮತ್ತು ರಸಗೊಬ್ಬರಗಳಂತಹ ವಿವಿಧ ಸಚಿವಾಲಯಗಳೊಂದಿಗೆ ನಿಕಟ ಒಡನಾಟದಲ್ಲಿ ಭಾರತೀಯ ರೈಲ್ವೆ ಕಾರ್ಯನಿರ್ವಹಿಸುತ್ತಿದೆ.