ನವದೆಹಲಿ: ಕೊರೊನಾ ಸೋಂಕಿನ ವಿಚಾರದಲ್ಲಿ ಇಡೀ ಪ್ರಪಂಚವೇ ಚೀನಾವನ್ನು ದ್ವೇಷಿಸುತ್ತಿರುವ ಈ ಸಮಯವನ್ನು ಭಾರತ ದೊಡ್ಡ ಪ್ರಮಾಣದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ತನ್ನ ಆರ್ಥಿಕ ಅವಕಾಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನಿ ಗಡ್ಕರಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿದ್ದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಗಡ್ಕರಿ, 'ಪ್ರಪಂಚದಾದ್ಯಂತ, ಚೀನಾದ ಬಗ್ಗೆ ದ್ವೇಷದ ಭಾವನೆ ಮೂಡಿದೆ. ಇದನ್ನು ಭಾರತ ಒಂದು ಅವಕಾಶವಾಗಿ ಪರಿವರ್ತಿಸಲು ಸಾಧ್ಯವಿದೆ' ಎಂದು ಹೇಳಿದ್ದಾರೆ
ಚೀನಾದಿಂದ ನಿರ್ಗಮಿಸಿದ ಜಪಾನ್ ತನ್ನ ವ್ಯವಹಾರಗಳಿಗಾಗಿ ಘೋಷಿಸಿದ ಆರ್ಥಿಕ ಪ್ಯಾಕೇಜ್ ಅನ್ನು ಉಲ್ಲೇಖಿಸಿದ ಗಡ್ಕರಿ, 'ನಾವು ಈ ಬಗ್ಗೆ ಗಮನ ಹರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಅವರಿಗೆ ಬೇಕಾದ ಅನುನುಮತಿಗಳನ್ನು ನೀಡುತ್ತೇವೆ' ಹೇಳಿದ್ದಾರೆ.
ಕೊರೊನಾ ಬಗೆಗಿನ ಮಾಹಿತಿಯನ್ನು ಚೀನಾ ಉದ್ದೇಶಪೂರ್ವಕವಾಗಿಯೇ ತಡೆದಿದೆ ಎಂದಾದರೆ ಭಾರತ, ಚೀನಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಹುದೆ? ಎಂದು ಪ್ರಶ್ನಿಸಿದ್ದಕ್ಕೆ, ಇದು ವಿದೇಶಾಂಗ ಸಚಿವಾಲಯ ಮತ್ತು ಪ್ರಧಾನಮಂತ್ರಿಯವರಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿದ್ದಾರೆ.