ಐರೋಪ್ಯ ಒಕ್ಕೂಟದೊಂದಿಗೆ 13 ವರ್ಷಗಳ ಸುದೀರ್ಘ ಚರ್ಚೆಯ ನಂತರ, ಭಾರತ ಹಾಗೂ ಐರೋಪ್ಯ ಒಕ್ಕೂಟದ ನಡುವೆ ನಾಗರಿಕ ಪರಮಾಣು ಇಂಧನ ಸಹಕಾರ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಲಾಗಿದೆ. ಸದ್ಯ ಚೀನಾ ಹಾಗೂ ಭಾರತ ಇವೆರಡೇ ದೇಶಗಳು ನಾಗರಿಕ ಪರಮಾಣು ಇಂಧನ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ವಿಶ್ವದ ಬಹುತೇಕ ಇತರ ರಾಷ್ಟ್ರಗಳು ಒಂದೋ ಪರಮಾಣು ಇಂಧನದ ಉತ್ಪಾದನೆಯನ್ನೇ ನಿಲ್ಲಿಸಿವೆ ಅಥವಾ ಅದರ ಮೇಲಿನ ಅವಲಂಬನೆಯನ್ನು ನಿಧಾನವಾಗಿ ಕಡಿಮೆಗೊಳಿಸುತ್ತಿವೆ.
ಭಾರತದ ಪರಮಾಣು ಇಂಧನ ಕ್ಷಮತೆಯ ಒಂದು ಪಕ್ಷಿನೋಟ..
ಭಾರತ ಒಟ್ಟು 22 ವಾಣಿಜ್ಯ ಸ್ವರೂಪದ ಕಾರ್ಯನಿರತ ಅಣು ವಿದ್ಯುತ್ ಸ್ಥಾವರಗಳನ್ನು ಹೊಂದಿದೆ. ಭಾರತೀಯ ಪರಮಾಣು ವಿದ್ಯುತ್ ನಿಗಮ ನಿರ್ವಹಿಸುತ್ತಿರುವ ಈ ಘಟಕಗಳ ಒಟ್ಟು ಸಾಮರ್ಥ್ಯ 6780 ಮೆಗಾವ್ಯಾಟ್ನಷ್ಟಿದೆ. ಒಟ್ಟು 9000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಲ್ಲ ಇನ್ನೂ 12 ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಭಾರತ ಯೋಜನೆ ಹಾಕಿಕೊಂಡಿದೆ. ಇವುಗಳ ಪೈಕಿ 6700 ಮೆಗಾವ್ಯಾಟ್ ಸಾಮರ್ಥ್ಯದ 9 ರಿಯಾಕ್ಟರ್ಗಳ ನಿರ್ಮಾಣ ಕಾರ್ಯ ಈಗಾಗಲೇ ಚಾಲನೆಯಲ್ಲಿದೆ. ಹಾಗೆಯೇ ಒಟ್ಟಾರೆ 5 ಸ್ಥಳಗಳಲ್ಲಿ 25,248 ಮೆಗಾವ್ಯಾಟ್ ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
22,480 ಮೆಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆಯ ಗುರಿ
ಪ್ರಸ್ತುತ ಇರುವ 6,780 ಮೆಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2031ರ ವೇಳೆಗೆ 22,480 ಮೆಗಾವ್ಯಾಟ್ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಫೆಬ್ರವರಿಯಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದರು.
ವಿವಿಧ ರಾಜ್ಯಗಳಲ್ಲಿರುವ ಅಣು ವಿದ್ಯುತ್ ಸ್ಥಾವರಗಳು
ಮಹಾರಾಷ್ಟ್ರ: ತಾರಾಪುರ ಅಟಾಮಿಕ್ ಪವರ್ ಸ್ಟೇಷನ್ - 4 ಯುನಿಟ್ಗಳು - 1400 ಮೆಗಾವ್ಯಾಟ್ ಸಾಮರ್ಥ್ಯ
ರಾಜಸ್ಥಾನ: ರಾಜಸ್ಥಾನ ಅಟಾಮಿಕ್ ಪವರ್ ಸ್ಟೇಷನ್ - 6 ಯುನಿಟ್ಗಳು - 1180 ಮೆಗಾವ್ಯಾಟ್ ಸಾಮರ್ಥ್ಯ
ತಮಿಳು ನಾಡು: ಮದ್ರಾಸ್ ಅಟಾಮಿಕ್ ಪವರ್ ಸ್ಟೇಷನ್ - 2 ಯುನಿಟ್ಗಳು - 440 ಮೆಗಾವ್ಯಾಟ್ ಸಾಮರ್ಥ್ಯ
ಕರ್ನಾಟಕ: ಕೈಗಾ ಅಣು ವಿದ್ಯುತ್ ಸ್ಥಾವರ - 4 ಯುನಿಟ್ಗಳು - 880 ಮೆಗಾವ್ಯಾಟ್ ಸಾಮರ್ಥ್ಯ
ತಮಿಳುನಾಡು: ಕೂಡಂಕುಳಂ - 2 ಯುನಿಟ್ಗಳು - 2000 ಮೆಗಾವ್ಯಾಟ್ ಸಾಮರ್ಥ್ಯ
ಉತ್ತರ ಪ್ರದೇಶ: ನರೋರಾ ಅಟಾಮಿಕ್ ಪವರ್ ಸ್ಟೇಷನ್ - 2 ಯುನಿಟ್ಗಳು - 440 ಮೆಗಾವ್ಯಾಟ್ ಸಾಮರ್ಥ್ಯ
ಗುಜರಾತ: ಕಾಕ್ರಾಪುರ್ ಅಟಾಮಿಕ್ ಪವರ್ ಸ್ಟೇಷನ್ - 2 ಯುನಿಟ್ಗಳು - 440 ಮೆಗಾವ್ಯಾಟ್ ಸಾಮರ್ಥ್ಯ
ಇತರ ರಾಷ್ಟ್ರಗಳೊಂದಿಗೆ ನಾಗರಿಕ ಪರಮಾಣು ಒಪ್ಪಂದ
ಅಮೆರಿಕ, ಫ್ರಾನ್ಸ್, ರಷ್ಯಾ, ಕೆನಡಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಶ್ರೀ ಲಂಕಾ, ಯುಕೆ, ಜಪಾನ್, ವಿಯೆಟ್ನಾಂ, ಬಾಂಗ್ಲಾದೇಶ, ಕಜಾಕಿಸ್ತಾನ್, ದಕ್ಷಿಣ ಕೊರಿಯಾ ಮತ್ತು ಝೆಕ್ ರಿಪಬ್ಲಿಕ್ ರಾಷ್ಟ್ರಗಳೊಂದಿಗೆ ಭಾರತವು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ.