ನವದೆಹಲಿ: ಕೊರೊನಾ ಸೋಂಕಿತರ ಪರೀಕ್ಷೆ ಹೆಚ್ಚಳದಲ್ಲಿ ದೇಶ ದಾಪುಗಾಲಿಡುತ್ತಿದೆ. 24 ಗಂಟೆಯಲ್ಲಿ 55,079 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 876 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇದರಿಂದಾಗಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27,02,743ಕ್ಕೆ ಏರಿಕೆಯಾಗಿದ್ದು, ಸದ್ಯಕ್ಕೆ 6,73,166 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 19,77,780 ಮಂದಿ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾಗಿದ್ದು, 51,797 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಸೋಂಕು ಪತ್ತೆ ಪರೀಕ್ಷೆಗಳೂ ದೇಶದಲ್ಲಿ ವೇಗವಾಗಿ ನಡೆಯುತ್ತಿದ್ದು, ಆಗಸ್ಟ್ 16ರಂದು 7,31,697 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಈವರೆಗೆ 3,00,41,400 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ.
5,95,865 ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯವಾಗಿದೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಿವೆ.