ನವದೆಹಲಿ: ಕೊರೊನಾ ಸೋಂಕಿತರ ಸ್ಥಾನದಲ್ಲಿ ದೇಶ ದಾಪುಗಾಲಿಡುತ್ತಿದೆ. 24 ಗಂಟೆಯಲ್ಲಿ 64,531 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 1092 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇದರಿಂದಾಗಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27,67,274ಕ್ಕೆ ಏರಿಕೆಯಾಗಿದ್ದು , ಸದ್ಯಕ್ಕೆ 6,76,514 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 20,37,871 ಮಂದಿ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾಗಿದ್ದು, 52,889 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಕ್ರಿಯ ಸೋಂಕಿತರ ಪ್ರಮಾಣದಲ್ಲಿ ಶೇಕಡಾ 24.45ರಷ್ಟು ಏರಿಕೆಯಾಗಿದ್ದು, ಮರಣ ಪ್ರಮಾಣ ಶೇಕಡಾ 1.91ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸೋಂಕು ಪತ್ತೆ ಪರೀಕ್ಷೆಗಳೂ ದೇಶದಲ್ಲಿ ವೇಗವಾಗಿ ನಡೆಯುತ್ತಿದ್ದು, ಆಗಸ್ಟ್ 17ರಂದು 8,01,518 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಈವರೆಗೆ 3,17,42,782 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ.
5,95,865 ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯವಾಗಿದೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಿವೆ.