ನವದೆಹಲಿ: ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರ ರಾತ್ರಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಹಿಂಸಾತ್ಮಕ ಸಂಘರ್ಷದಿಂದಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧವು ಬಿಗಡಾಯಿಸಿದೆ.
ಆದರೆ ಮಾಸ್ಕೋದಲ್ಲಿ ಬುಧವಾರ (ಜೂನ್ 24), ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗ್ ಅವರು ರೆಡ್ ಸ್ಕ್ವೇರ್ನಲ್ಲಿ ನಡೆದ ವಿಕ್ಟರಿ ಪೆರೇಡ್ ಸಂದರ್ಭದಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರೊಂದಿಗೆ ಭೇಟಿಯ ವೇಳೆಯಲ್ಲಿ ಪರಸ್ಪರ ಮಾತನಾಡುವ ಸಾಧ್ಯತೆ ಇದೆ.
ಈ ವೇಳೆ ಭಾರತ, ಚೀನಾ ಮತ್ತು ರಷ್ಯಾದ ರಕ್ಷಣಾ ಮಂತ್ರಿಗಳು ಒಂದೇ ವೇದಿಕೆ ಹಂಚಿಕೊಳ್ಳುವ ಸಾಧ್ಯತೆಯಿದೆ. ಭಾರತ ಮತ್ತು ಚೀನಾದ ರಕ್ಷಣಾ ಮಂತ್ರಿಗಳು ಪರಸ್ಪರ ಮಾತನಾಡಲು ಸಾಧ್ಯವಾಗುವಂತೆ ಇದನ್ನು ಬಹುಶಃ ವ್ಯವಸ್ಥೆಗೊಳಿಸಲಾಗಿದೆ. ಅದಕ್ಕಾಗಿ ಸಾಕಷ್ಟು ಅವಕಾಶಗಳಿವೆ ಎಂದು ಮೂಲವೊಂದು ಈಟಿವಿ ಭಾರತ್‌ಗೆ ತಿಳಿಸಿದೆ.
ಏಷ್ಯಾದ ಇಬ್ಬರು ದೈತ್ಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳ ನಡುವೆ ‘ಒಂದರ ಹಿಂದೆ ಒಂದು’ ಸಭೆಯನ್ನು ಸಹ ನಿಗದಿಪಡಿಸಲಾಗಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ವಿಶೇಷವೆಂದರೆ, ಮಂಗಳವಾರ (ಜೂನ್ 23) ರಷ್ಯಾ-ಭಾರತ-ಚೀನಾ ( ಆರ್ಐಸಿ) ತ್ರಿಪಕ್ಷೀಯ ಸಮಾವೇಶದಲ್ಲಿ ಭಾರತದ ವಿದೇಶಾಂಗ ಮಂತ್ರಿಗಳಾದ ಎಸ್.ಜೈಶಂಕರ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮತ್ತು ಚೀನಾದ ವಾಂಗ್ ಯಿ ಭೇಟಿಯಾಗಲಿದ್ದಾರೆ. ಈ ವೇಳೆ ಚೀನಾ ಮತ್ತು ಭಾರತದ ಬಿಕ್ಕಟ್ಟನ್ನು ಬಗೆಹರಿಸಲು ರಷ್ಯಾ ಮಧ್ಯಸ್ಥಿಕೆ ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರತಿವರ್ಷ ಮಾಸ್ಕೋದಲ್ಲಿ ಆಯೋಜಿಸಲಾಗುವ, ಎರಡನೇ ವಿಶ್ವಯುದ್ಧದಲ್ಲಿ ನಾಜಿ ಜರ್ಮನಿಯ ಮೇಲೆ ಮಿತ್ರರಾಷ್ಟ್ರಗಳ ವಿಜಯದ 75 ನೇ ವರ್ಷಾಚರಣೆಯ ನೆನಪಿಗಾಗಿ ಮತ್ತು ರಷ್ಯಾ ಮತ್ತು ಇತರ ಸ್ನೇಹಪರ ದೇಶಗಳ ಜನರು ಮಾಡಿದ ವೀರತೆ ಮತ್ತು ತ್ಯಾಗಗಳನ್ನು ಗೌರವಿಸಲು ವಿಕ್ಟರಿ ಪೆರೇಡ್ ನಡೆಸಲಾಗುತ್ತದೆ. ಭಾರತ ಮತ್ತು ಚೀನಾ ಸೇರಿದಂತೆ ಸುಮಾರು 13 ದೇಶಗಳು ಬುಧವಾರದ ಕಾರ್ಯಕ್ರಮದಲ್ಲಿ ಮಿಲಿಟರಿ ತುಕಡಿಗಳನ್ನು ಪ್ರಸ್ತುತ ಪಡಿಸುತ್ತವೆ.