ಕೋಲ್ಕತ್ತಾ: ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ನೆರೆಯ ಬಾಂಗ್ಲಾದೇಶದ ನಗರಗಳು ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಡುವೆ ಚಲಿಸುತ್ತಿದ್ದ ಪ್ರಯಾಣಿಕ ರೈಲು ಸೇವೆಯನ್ನು ಇಂದಿನಿಂದ ಸ್ಥಗಿತಗೊಳಿಸಿರುವುದಾಗಿ ಪೂರ್ವ ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊವಿಡ್ ಹರಡುವ ಭೀತಿಯಲ್ಲಿ ಮುಂಜಾಗೃತ ಕ್ರಮವಾಗಿ ಮಾ.15 ರಿಂದ ಏ.15ರ ವರೆಗೆ ಕೋಲ್ಕತ್ತಾದಿಂದ ಬಾಂಗ್ಲಾದ ರಾಜಧಾನಿ ಢಾಕಾಗೆ ಸಂಪರ್ಕಿಸುವ ಮೈತ್ರಿ ಮತ್ತು ಖುಲ್ನಾಗೆ ಸಂಪರ್ಕಿಸುವ ಬಂಧನ್ ಎಕ್ಷ್ಪ್ರೆಸ್ ರೈಲು ಸೇವೆಯನ್ನು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೇ ಪೂರ್ವ ರೈಲ್ವೆ ವಲಯದ ವಿವಿಧ ವಿಭಾಗಗಳಲ್ಲಿರುವ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳನ್ನು ತೆರೆಯಲಾಗಿದೆ. ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿಗಳಲ್ಲಿ ಅನಾರೋಗ್ಯದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.