ನವದೆಹಲಿ: ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ 'ಒಂದು ದೇಶ, ಒಂದೇ ಚುನಾವಣೆ'ಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 73ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
ಗುರುವಾರ ಕೆಂಪು ಕೋಟೆಯಲ್ಲಿ 6ನೇ ಬಾರಿಗೆ ಧ್ವಜರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾದ ಒಂದು ದೇಶ, ಒಂದೇ ಚುನಾವಣೆ ವ್ಯವಸ್ಥೆ ಜಾರಿಯ ಕುರಿತು ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.
ಜಿಎಸ್ಟಿ, ತೆರಿಗೆಯ ಮುಖಾಂತರ ಏಕ ರಾಷ್ಟ್ರ, ಏಕ ತೆರಿಗೆ ಕನಸನ್ನು ಜೀವಂತಗೊಳಿಸಿತು. ಭಾರತ ಒಂದು ರಾಷ್ಟ್ರವೆಂಬುದು ಸಾಧಿಸಿದೆ. ಇಂಧನ ಕ್ಷೇತ್ರದಲ್ಲಿಯೂ ಸಹ ಸಾಧ್ಯವಾಗಿದೆ. ಹಲವು ವಿಧದ ವ್ಯವಸ್ಥೆಗಳಲ್ಲಿ ಒಂದೇ ರಾಷ್ಟ್ರವಾಗಿರುವ ಭಾರತ, ಈಗ ಒಂದೇ ಚುನಾವಣೆಯ ಕುರಿತು ಮಾತನಾಡಬೇಕಿದೆ ಎಂದು ಹೇಳಿದರು.
ಈ ಬಗ್ಗೆ ಪ್ರಜಾಪ್ರಭುತ್ವದಲ್ಲಿ ಕೆಲವು ಸಮಯದ ವರೆಗೆ ಚರ್ಚೆ ನಡೆಯಬೇಕಿದೆ. 'ಏಕ್ ಭಾರತ್, ಶ್ರೇಷ್ಠ ಭಾರತ್' ಕನಸು ನನಸಾಗಿಸಲು ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಾಗಿದೆ ಎಂದು ಪ್ರಧಾನಿ ತಿಳಿಸಿದರು.
ಒಂದು ರಾಷ್ಟ್ರ, ಒಂದೇ ಸಂವಿಧಾನ ಎಂಬ ಈ ಮನೋಭಾವವು ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ. ದೇಶದ ಹಿತಾಸಕ್ತಿಗೆ ಇಂತಹವು ಅಗ್ರಗಣ್ಯದಾದವು. ವಿಭಿನ್ನವಾಗಿ ಯೋಚಿಸಿದ್ದರೂ ನಮಗೆ ಭಾರತವೇ ಮೊದಲನೆಯದಾಗಿ ಕಾಣಿಸಬೇಕು. ಭಾರತದ ಭವಿಷ್ಯವೆಲ್ಲವೂ ರಾಜಕೀಯ ಕೇಂದ್ರೀಕೃತವಾಗಿಲ್ಲ. ರಾಜಕೀಯ ಹೊರತಾಗಿ ರಾಷ್ಟ್ರದ ಹಿತಾಸಕ್ತಿಯೊಂದಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.