ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಕೆ ಮಾಡಿ ನೋಡಿದರೆ, ಭಾರತೀಯ ಕೃಷಿ ಕ್ಷೇತ್ರ ಎದುರಿಸುತ್ತಿರುವ ತೊಂದರೆಗಳು ತುಂಬಾ ಹೆಚ್ಚು. ನೈಸರ್ಗಿಕ ವಿಪತ್ತುಗಳು ಅವರ ಭರವಸೆಗಳನ್ನು ಕಮರಿಸುತ್ತಿರುವ ಜೊತೆಗೆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿವೆ. ದೇಶದ ಶೇ 50ಕ್ಕೂ ಅಧಿಕ ರೈತರು ಸಾಲದಲ್ಲಿ ಮುಳುಗಿದ್ದಾರೆ ಎಂದು ಹೇಳುತ್ತದೆ ನ್ಯಾಷನಲ್ ಸ್ಯಾಂಪಲ್ ಸರ್ವೇ ( ಎನ್ ಎಸ್ ಎಸ್ ಒ ) ಅಧ್ಯಯನ. ಆಂಧ್ರಪ್ರದೇಶದಲ್ಲಿ ಈ ಪ್ರಮಾಣ ಶೇಕಡಾ 93 ರಷ್ಟು ಇದೆ ಎಂದು ‘ಸೆಸ್’ ಅಧ್ಯಯನ ಈ ಹಿಂದೆ ವರದಿ ನೀಡಿತ್ತು.
ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣ ಮಾಡುವ ಕೇಂದ್ರ ಸರ್ಕಾರದ ಗುರಿ ಕೇವಲ ಕನ್ನಡಿ ಒಳಗಿನ ಗಂಟಿನಂತೆ ತೋರುತ್ತಿದೆ. ಬೆಳೆ ನಷ್ಟದಿಂದಾಗಿ ಸಾಲದ ಬಲೆಗೆ ಬೀಳುವವರು ಕೊನೆಗೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. 1995 – 2015 ರ ಅವಧಿಯಲ್ಲಿ 3.10 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಬಿಕ್ಕಟ್ಟು ಅನೇಕ ರಾಜ್ಯಗಳ ರೈತರನ್ನು ತಲ್ಲಣಗೊಳಿಸುವಂತೆ ಮಾಡಿದೆ. ರೈತರ ಸಮಸ್ಯೆ ಪರಿಹಾರ ಮಾಡಲು ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಆಡಳಿತ ನಡೆಸುವವರು ಹೆಮ್ಮೆಯಿಂದ ಬೀಗುತ್ತಿದ್ದರೂ, ರೈತರ ಜೀವನದಲ್ಲಿ ಯಾವುದೇ ಸುಧಾರಣೆ ಆಗಿಲ್ಲ.
ಹಿಂದಿನ ಬೆಳೆ ವಿಮೆ ಯೋಜನೆಗಳನ್ನು ಬದಲಿಸಿ ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷಗಳ ಹಿಂದೆ ಅಂದರೆ 2016 ರ ಜನವರಿಯಲ್ಲಿ ನೂತನವಾದ ‘ಪ್ರಧಾನಮಂತ್ರಿ ಬಿಮಾ ಯೋಜನೆ’ ಜಾರಿಗೆ ತಂದರು. ಹಿಂದಿನ ಸರ್ಕಾರಗಳ ವಿಮಾ ಯೋಜನೆಗಳು ರೈತರಿಗೆ ಸಹಾಯ ಮಾಡಲು ವಿಫಲವಾದ ಕಾರಣ, ಈ ಯೋಜನೆ ಜಾರಿಗೆ ತರುವ ಅಗತ್ಯ ಇದೆ ಎಂದು ಭಾವಿಸಲಾಗಿತ್ತು. ಹಿಂದಿನ ಬೆಳೆ ವಿಮಾ ಯೋಜನೆಗಳು ರೈತನಿಗೆ ಕಡಿಮೆ ಪರಿಹಾರ ನೀಡಿ ಹೆಚ್ಚಿನ ಪ್ರೀಮಿಯಂ ವಿಧಿಸುತ್ತಿದ್ದವು.
ಪ್ರೀಮಿಯಂನಲ್ಲಿ ಸರ್ಕಾರಗಳ ಪಾಲು ಕೂಡ ಕಡಿಮೆ ಇತ್ತು. ಆದರೆ ನೂತನ ಯೋಜನೆ ಸಂಪೂರ್ಣವಾಗಿ ಭಿನ್ನ ಮತ್ತು ಅಪೂರ್ವ ಎನಿಸಿದೆ. ನಷ್ಟ ನಿರ್ಣಯ ಮಾಡಲು ಮತ್ತು ರೈತರಿಗೆ ತ್ವರಿತ ಪರಿಹಾರ ನೀಡಲು, 'ರಿಮೋಟ್ ಸೆನ್ಸಿಂಗ್ ಸ್ಮಾರ್ಟ್ ಫೋನ್' ಮತ್ತು ಡ್ರೋನ್‌ಗಳಂತಹ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಯೋಜನೆ ರೈತರ ಆದಾಯದ ಏರಿಳಿತ ತಡೆಯಲು ಸಹಾಯ ಮಾಡುತ್ತದೆ ಮತ್ತು ಅವರು ಜಮೀನಿನ ಆಸರೆ ತೊರೆದು ಇತರೆ ಉದ್ಯೋಗ ಅರಸಿ ಹೋಗುವುದನ್ನು ತಪ್ಪಿಸುತ್ತದೆ.
ಅಸಮರ್ಪಕ ನಿರ್ವಹಣೆ :
2019 ರ ಮುಂಗಾರಿನ ಹೊತ್ತಿಗೆ ಸಾಕಷ್ಟು ಸಂಖ್ಯೆಯ ರೈತರು ಈ ಯೋಜನೆಯ ಅಡಿ ಅರ್ಜಿ ಹಾಕಿದ್ದಾರೆ. 2016 - 17ರಲ್ಲಿ ಸುಮಾರು 5.80 ಕೋಟಿ, 2017 - 18ರಲ್ಲಿ 5.25 ಕೋಟಿ ಮತ್ತು 2018 - 19ರಲ್ಲಿ 5.64 ಕೋಟಿ ರೈತರು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಆಗಿದ್ದಾರೆ, ಮೂರು ವರ್ಷಗಳ ಒಟ್ಟು ಪ್ರೀಮಿಯಂ ಸಂಗ್ರಹ ಕ್ರಮವಾಗಿ 22,008 ಕೋಟಿ, 25,481 ಕೋಟಿ ಹಾಗೂ 29,035 ಕೋಟಿ ರೂಪಾಯಿ ಇದೆ.
ರೈತರ ಸಂಖ್ಯೆ ಕಡಿಮೆ ಇದ್ದರೂ 'ಪ್ರೀಮಿಯಂ' ಮೊತ್ತ ಹೆಚ್ಚು ಎಂಬುದು ಈ ಅಂಕಿ ಸಂಖ್ಯೆಗಳಿಂದ ಸ್ಪಷ್ಟ ಆಗುತ್ತದೆ. ರೈತರ ಪಾಲು ಕ್ರಮವಾಗಿ 4,227 ಕೋಟಿ, 4,431 ಕೋಟಿ ಮತ್ತು 4,889 ಕೋಟಿ ರೂ. ಇತ್ತು. 2019 - 20ರ ಮೂಂಗಾರಿನ ಅವಧಿಯಲ್ಲಿ ಸುಮಾರು 3.70 ಕೋಟಿ ರೈತರು ಈ ಯೋಜನೆಯ ಅಡಿ ನೋಂದಣಿ ಮಾಡಿಸಿಕೊಂಡಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಬ್ಯಾಂಕುಗಳಿಂದ ಸಾಲ ಪಡೆದಿಲ್ಲ ಎಂದು ಅಂದಾಜು ಮಾಡಲಾಗಿದೆ.
ರೈತರಿಗೆ ವಿಧಿಸಲಾಗುವ ಪ್ರೀಮಿಯಂ ಮೊತ್ತಕ್ಕೆ ಹೋಲಿಕೆ ಮಾಡಿದರೆ ವಿಮಾ ಕಂಪನಿಗಳು ರೈತರಿಗೆ ಪಾವತಿಸುವ ಪರಿಹಾರದ ಮೊತ್ತ ತುಂಬಾ ಭಿನ್ನ. ಮೊದಲ ವರ್ಷದಲ್ಲಿ 5,391 ಕೋಟಿ ರೂ. ಮತ್ತು ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ 3,776 ಕೋಟಿ ಮತ್ತು 14,789 ಕೋಟಿ ರೂ.ಗಳಷ್ಟಿದ್ದ ವಿಮಾ ಕಂಪನಿಗಳ ಲಾಭವೇ ಈ ವ್ಯತ್ಯಾಸಕ್ಕೆ ಕಾರಣ ಆಗಿದೆ. ಈ ಯೋಜನೆಯಿಂದ ವಿಮಾ ಕಂಪನಿಗಳು ಹೆಚ್ಚಿನ ಲಾಭ ಪಡೆದಿವೆ ಎಂದು ತೋರುತ್ತದೆ. ಇದರ ಪರಿಣಾಮ, ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡಲು ಮಾತ್ರ ಯೋಜನೆ ಜಾರಿಗೆ ತರಲಾಗಿದೆ ಎಂದು ರೈತ ಸಂಘಗಳು ಆರೋಪ ಮಾಡುತ್ತಿವೆ.
ಈ ಯೋಜನೆಯ ನಿರ್ವಹಣೆಯಲ್ಲಿ ನ್ಯೂನತೆಗಳು ಕಂಡು ಬಂದಿವೆ. ಕೃಷಿ ಸಚಿವಾಲಯ ಸಂಪೂರ್ಣ ಗಮನ ನೀಡಲು ವಿಫಲವಾದ ಕಾರಣ, ವಿಮಾ ಕಂಪನಿಗಳು ವಾರ್ಷಿಕವಾಗಿ ನೂರಾರು ಕೋಟಿ ರೂಪಾಯಿಗಳ ವಿಮಾ ಮೊತ್ತ ಪಾವತಿ ಮಾಡಲು ಅಸಡ್ಡೆ ತೋರುತ್ತಿವೆ. 2018 ರ ಡಿಸೆಂಬರ್‌ನಲ್ಲಿ ಕೊನೆಗೊಂಡ ಮುಂಗಾರು ವೇಳೆಗೆ, ವಿಮಾ ಕಂಪನಿಗಳು ರೈತರಿಗೆ ಐದು ಸಾವಿರ ಕೋಟಿ ರೂಪಾಯಿಗಳ ಪರಿಹಾರ ಬಾಕಿ ಉಳಿಸಿಕೊಂಡಿರುವುದು ಯೋಜನೆಯ ಅಸಮರ್ಥ ಅನುಷ್ಠಾನಕ್ಕೆ ಸ್ಪಷ್ಟ ನಿದರ್ಶನ ಆಗಿದೆ.
ಆ ವರ್ಷದ ಮುಂಗಾರು ಅವಧಿಯಲ್ಲಿ ರೈತರಿಗೆ ಈ ಯೋಜನೆಯ ಅಡಿ 14,813 ಕೋಟಿ ರೂ. ಪರಿಹಾರ ನೀಡಬೇಕಿತ್ತು. ಆದರೆ 2019 ರ ಜುಲೈ ವೇಳೆಗೆ ಕೇವಲ 9,799 ಕೋಟಿ ರೂ. ಮಾತ್ರ ಪಾವತಿ ಮಾಡಲಾಗಿದೆ. 45 ಜಿಲ್ಲೆಗಳ ರೈತರಿಗೆ ಅವರ ವಿಮೆಯ ಶೇ 50ರಷ್ಟು ಹಣವನ್ನು ಕೂಡ ನೀಡದೇ ಇರುವುದು ಗಮನಾರ್ಹ ಸಂಗತಿ.
ಯೋಜನೆಯ ನಿಯಮದಂತೆ, ಮುಂಗಾರು ಅಥವಾ ಹಿಂಗಾರು ಅವಧಿ ಅಂತ್ಯಗೊಂಡ ಎರಡು ತಿಂಗಳ ಒಳಗೆ ರೈತರ ಬಾಕಿ ಪಾವತಿ ಆಗಬೇಕು. 2018 ರ ಡಿಸೆಂಬರ್ ಹೊತ್ತಿಗೆ ಮುಂಗಾರು ಅವಧಿ ಕೊನೆ ಆಗಿದೆ. ಆದರೆ ವಿಮಾ ಕಂಪನಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ 2019ರ ಡಿಸೆಂಬರ್ ಮುಗಿದಿದ್ದರೂ ಕೂಡ ರೈತರಿಗೆ ಹಣ ಪಾವತಿ ಮಾಡಲು ಸಾಧ್ಯ ಆಗಿಲ್ಲ. ಮತ್ತೊಂದೆಡೆ, ಕೆಲವು ಬೆಳೆಗಳ ವಿಮಾ ಕಂತು ಹೆಚ್ಚು ಎಂದು ರೈತರು ದೂರಿದ್ದಾರೆ. ಹೀಗಾಗಿ 2020ರ ಮುಂಗಾರು ಅವಧಿ ಮುಕ್ತಾಯ ಆಗುವ ವೇಳೆಗೆ ಆ ಬೆಳೆಗಳನ್ನು ಯೋಜನೆಯ ವ್ಯಾಪ್ತಿಯಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರ ಕೈಗೊಂಡಿದ್ದು, ರಾಜ್ಯ ಸರ್ಕಾರಗಳ ಜೊತೆಗೆ ಸಮಾಲೋಚನೆ ನಡೆಸುತ್ತಿದೆ.
ಮತ್ತೊಂದೆಡೆ, ಅಲ್ಪಾವಧಿ ನಿರ್ಧಾರದಿಂದಾಗಿ ವಿಮಾ ಕಂಪನಿಗಳು ತೊಂದರೆ ಅನುಭವಿಸುವ ಸಾಧ್ಯತೆಗಳು ಇವೆ. 2018 - 19ರ ಅವಧಿಯಲ್ಲಿ ಮರಾಠವಾಡ ಪ್ರದೇಶದ ರೈತರು ಆತ್ಮಹತ್ಯೆ ಮಾಡಿಕೊಂಡ ವೇಳೆ ವಿಮಾ ಕಂಪನಿಗಳು ಯೋಜನೆಯಿಂದಾಗಿ ರೂ 1,237 ಕೋಟಿ ಲಾಭ ಪಡೆದುಕೊಂಡಿವೆ ಎಂದು ಸಹಕಾರ ಕಾಯ್ದೆಯಿಂದ ತಿಳಿದುಬಂದಿದೆ. ಅಂದರೆ ಪ್ರತಿ ಆತ್ಮಹತ್ಯೆಗೆ ವಿಮಾ ಕಂಪನಿಗಳು ಸರಾಸರಿ 1 ಕೋಟಿ ರೂ. ಪರಿಹಾರದ ಹಣ ಪಡೆದಿವೆ. ವಿಮಾ ಕಂಪನಿಗಳ ಲೆಕ್ಕಾಚಾರದಲ್ಲಿ ಸಾಕಷ್ಟು ಪರಿಣತಿಯ ಕೊರತೆ ಇರುವುದು ತೀರಾ ಅಸಮಾಧಾನ ಮೂಡಿಸುವ ಸಂಗತಿ ಆಗಿದೆ.
ಈ ಯೋಜನೆಯ ಅಡಿ ಬೆಳೆ ನಷ್ಟ ನಿರ್ಣಯ ಮಾಡುವಲ್ಲಿ ಹಲವು ತೊಂದರೆಗಳು ಇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪರಿಣಾಮ ಸಕಾಲಿಕವಾಗಿ ಪರಿಹಾರ ಪಾವತಿ ಮಾಡುವುದು ಕಷ್ಟಕರವಾಗಿ ತೋರುತ್ತಿದೆ. ಈ ಯೋಜನೆಯ ಅಡಿ, ಬೆಳೆ ಇಳುವರಿಯನ್ನು 'ಬೆಳೆ ಕಟಾವು’' ಪ್ರಯೋಗಗಳಿಂದ ಅಂದಾಜು ಮಾಡಲಾಗಿದೆ. ಕಡಿಮೆ ಸಮಯದಲ್ಲಿ ದೇಶದಲ್ಲಿ ಲಕ್ಷಾಂತರ ಪ್ರಯೋಗಗಳನ್ನು ನಡೆಸುವುದು ತುಂಬಾ ಕಷ್ಟ.
ಅಧಿಕಾರಿಗಳ ಪ್ರಕಾರ, ಈ ಉದ್ದೇಶಕ್ಕಾಗಿ ಬಳಸುವ ಸಾಫ್ಟ್ ವೇರ್ ಅಪ್ಲಿಕೇಶನ್ನಿನ ಕಾರ್ಯ ದಕ್ಷತೆ ಶೇ 15 ರಷ್ಟು ಕೂಡ ಇಲ್ಲ. ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಪರಿಹಾರ ಪಾವತಿ ವಿಳಂಬ ಆಗುತ್ತಿದೆ ಎಂದು ಕೇಂದ್ರ ಸರ್ಕಾರ ದೂಷಿಸುತ್ತಿದೆ. ಮತ್ತೊಂದೆಡೆ, ಸಾಲ ವಿತರಣೆ ಮಾಡುವಾಗಲೂ ವಿಮಾ ಪ್ರೀಮಿಯಂ ಅನ್ನು ಬ್ಯಾಂಕುಗಳು ಕಡಿತ ಮಾಡುತ್ತಿವೆ ಎಂದು ರೈತರು ಕೋಪಗೊಂಡಿದ್ದಾರೆ. ಈ ಸಮಸ್ಯೆ ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ಗಂಭೀರವಾಗಿ ಇದೆ.
ಪರಿಹಾರ ಲೆಕ್ಕಹಾಕಲು ಯಾರೂ ಇಲ್ಲ !
ಫಸಲ್ ಬೀಮಾ ಯೋಜನೆಯ ಅಡಿ ವಿಮೆ ಮಾಡಿದ ಮೊತ್ತದಲ್ಲಿ ಮುಂಗಾರು ಬೆಳೆಗೆ ಶೇ ಎರಡು, ಹಿಂಗಾರು ಬೆಳೆಗೆ ಶೇ 1.5 ಹಾಗೂ ವಾಣಿಜ್ಯ ಬೆಳೆಗಳಿಗೆ ಶೇ ಐದರಷ್ಟು ಹಣವನ್ನು ಪ್ರೀಮಿಯಂ ಎಂದು ನಿರ್ಧರಿಸಲಾಗುತ್ತದೆ. ಕಳೆದ ಏಳು ವರ್ಷಗಳ ನಿಜವಾದ ಇಳುವರಿ ಮತ್ತು ಸರಾಸರಿ ಇಳುವರಿಯ ನಡುವಿನ ವ್ಯತ್ಯಾಸವನ್ನು ಬೆಳೆ ನಷ್ಟ ಎಂದು ಲೆಕ್ಕ ಹಾಕಲಾಗುತ್ತದೆ. ಪರಿಹಾರದ ಮೊತ್ತ ನಿರ್ಧರಿಸುವಾಗ, ಎರಡು ವರ್ಷಗಳ ನೈಸರ್ಗಿಕ ವಿಕೋಪ ಹೊರತುಪಡಿಸಿ ಏಳು ವರ್ಷಗಳಲ್ಲಿ ಕೊಯ್ಲು ಮಾಡಿದ ಸರಾಸರಿ ಬೆಳೆಯನ್ನು ರೈತನ ನಷ್ಟದ ಶೇಕಡಾವಾರು (ನಷ್ಟ ಪರಿಹಾರ ಮಟ್ಟ) ಪ್ರಮಾಣದಿಂದ ಗುಣಿಸಲಾಗುತ್ತದೆ. ಈ ಮಟ್ಟ ಶೇ 70 – 90ರ ನಡುವೆ ಇರುತ್ತದೆ.
ಪ್ರೀಮಿಯಂ ಕಂತು ಕೂಡ ಅದಕ್ಕೆ ಅನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ, ಒಬ್ಬ ರೈತ ಸರಾಸರಿ ಇಳುವರಿಯ 60 ಕ್ವಿಂಟಲ್‌ಗೆ ವಿಮೆ ಮಾಡಿಸಿದ್ದಾಗ ಮತ್ತು ನಿಜವಾದ ಇಳುವರಿ 45 ಕ್ವಿಂಟಾಲ್ ಬಂದಿರುತ್ತದೆ ಎಂದಿಟ್ಟುಕೊಳ್ಳೋಣ. ಆಗ ರೈತ 60,000 ರೂಪಾಯಿಗೆ ವಿಮೆ ಮಾಡಿಸಿದ್ದರೆ, ಬೆಳೆ ನಷ್ಟಕ್ಕೆ ಶೇ 25 ರಷ್ಟು ಹಣದಂತೆ, ಪರಿಹಾರ 15,000 ರೂ. ಆಗಿರುತ್ತದೆ. ಈ ಯೋಜನೆಯಡಿ, ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಎಲ್ಲಾ ಬಗೆಯ ಹಾನಿಗಳಿಗೆ ರೈತನಿಗೆ ಪರಿಹಾರ ನೀಡಲಾಗುತ್ತದೆ. ತ್ವರಿತ ಪರಿಹಾರವಾಗಿ, ಪರಿಹಾರದ ಮೂರನೇ ಒಂದು ಭಾಗವನ್ನು ರಾಷ್ಟ್ರೀಯ ವಿಪತ್ತು ನಿಧಿ ಅಥವಾ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ ವಿಪತ್ತು ನಿಧಿಯಿಂದ ಪಾವತಿ ಮಾಡಲಾಗುತ್ತದೆ.
ಎಲ್ಲಾ ಖಾಸಗಿ ವಿಮಾ ಕಂಪನಿಗಳು ಕೈ ಜೋಡಿಸಿ ಹೆಚ್ಚು ಪ್ರೀಮಿಯಂ ಅನ್ನು ತಮ್ಮ ಬಳಿ ಇರಿಸಿಕೊಂಡು ಲಾಭ ಮಾಡಿಕೊಳ್ಳುತ್ತಿವೆ ಎಂದು ರೈತ ಸಂಘಗಳು ಆರೋಪ ಮಾಡುತ್ತಿವೆ. ದೇಶದ 40 ಜಿಲ್ಲೆಗಳಲ್ಲಿ ಮಾತ್ರ ರೈತರಿಗೆ ಶೇ 50 ರಷ್ಟು ಪರಿಹಾರ ನೀಡಲಾಗಿದೆ ಎಂಬುದನ್ನು ಗಮನಿಸಬೇಕು. ಈ ಎಲ್ಲ ಜಿಲ್ಲೆಗಳು ನೈಸರ್ಗಿಕ ವಿಕೋಪಕ್ಕೆ ಗುರಿ ಆಗಿದ್ದು ಅವು ಮುಖ್ಯವಾಗಿ ಬರಪೀಡಿತ ಪ್ರದೇಶಗಳು ಕೂಡ ಆಗಿವೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಸುರಿದ ಭಾರಿ ಮಳೆಯಿಂದಾಗಿ, ರೈತರು ಬಿತ್ತಿದ ಈರುಳ್ಳಿ, ಸೋಯಾಬೀಜ, ದಾಳಿಂಬೆ ಮುಂತಾದ ಬೆಳೆಗಳು ವ್ಯಾಪಕ ಹಾನಿಗೆ ತುತ್ತಾದವು. ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಈಡಾಗುವ ಪ್ರದೇಶಗಳನ್ನು ಒಳಗೊಳ್ಳುವ ಕಾರಣಕ್ಕಾಗಿ ಕೆಲವು ಕಂಪನಿಗಳು ಯೋಜನೆಯಿಂದ ದೂರ ಇರಲು ಗಂಭೀರ ಪ್ರಯತ್ನ ಮಾಡುತ್ತಿವೆ.
ಯೋಜನೆ ಪರಿಣಾಮಕಾರಿಯಾಗಿ ಜಾರಿ ಆಗಬೇಕಾದರೆ, ಸರ್ಕಾರಗಳು ರೈತರ ವಿಮಾ ಕಂತಿನ ಕೆಲವು ಭಾಗವನ್ನು ಭರಿಸಬೇಕಾಗುತ್ತದೆ. ನಕಲಿ ಬೀಜಗಳಿಂದ ರೈತರಿಗೆ ಆಗುವ ಹಾನಿಯ ಜೊತೆಗೆ ಆನೆ, ಕಾಡುಹಂದಿ ಹಾಗೂ ಕರಡಿಯಂತಹ ಪ್ರಾಣಿಗಳಿಂದ ಬೆಳೆಗಳಿಗೆ ಆಗುವ ಹಾನಿಯನ್ನು ಈ ಯೋಜನೆ ಒಳಗೊಂಡಿಲ್ಲ ಎಂಬುದು ವಿಷಾದನೀಯ. ಖಾಸಗಿ ವಿಮಾ ಕಂಪನಿಗಳನ್ನು ನಿಯಂತ್ರಿಸುವ ಸಲುವಾಗಿ ಪ್ರೀಮಿಯಂ ಮೇಲೆ ಗರಿಷ್ಠ ಮಿತಿ ಹೇರುವ ಅಗತ್ಯ ಇದೆ. ಇದರಿಂದ ರೈತರು ಕಡಿಮೆ ಬೆಲೆಗಳನ್ನು 'ಉಲ್ಲೇಖಿಸುತ್ತಾರೆ'.
ಖಾಸಗಿ ಕಂಪನಿಗಳು ತಮ್ಮ ಇಚ್ಛೆಗೆ ಅನುಸಾರವಾಗಿ ಪ್ರೀಮಿಯಂಗಳನ್ನು ನಿಗದಿಪಡಿಸುವುದು ಎಲ್ಲರಿಗೂ ಹೊರೆ ಆಗುತ್ತಿದೆ. ಸರ್ಕಾರಗಳು ಪ್ರಸ್ತುತ ಆಯಾ ವಿಮಾ ಕಂಪನಿಗಳಿಗೆ ಪ್ರೀಮಿಯಂ ಮೊತ್ತವನ್ನು ಪಾವತಿಸುತ್ತವೆ. ಬದಲಾಗಿ, ಸರ್ಕಾರಿ ವಿಮಾ ಕಂಪನಿಯ ಆಶ್ರಯದಲ್ಲಿ ಪ್ರತ್ಯೇಕ ನಿಧಿಯನ್ನು ರೂಪಿಸಲು ಸಾಧ್ಯವೇ ಮತ್ತು ಅದರ ಮೂಲಕ ಪ್ರೀಮಿಯಂ ಪಾವತಿಸಲು ಆಗುತ್ತದೆಯೇ ಎಂಬುದನ್ನು ಕಂಡುಕೊಳ್ಳಬೇಕು. ಇದರಿಂದ ಖಾಸಗಿ ವಿಮಾ ಕಂಪನಿಗಳಿಗೆ ಅನಗತ್ಯ ಪ್ರಯೋಜನ ದೊರೆಯುವುದು ತಪ್ಪುತ್ತದೆ ಮತ್ತು ರೈತನಿಗೆ ಗರಿಷ್ಠ ಲಾಭ ದೊರೆತಂತೆ ಆಗುತ್ತದೆ.