ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಭವಿಷ್ಯದ ಯೋಜನೆಗಳನ್ನು ಬಲಗೊಳಿಸುವುದು, 'ವಿಶೇಷ ಮತ್ತು ಸವಲತ್ತು ಕಾರ್ಯತಂತ್ರ ಸಹಭಾಗಿತ್ವ'ದ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಷ್ಯಾ ಅಧ್ಯಕ್ಷ ಪುಟಿನ್ ಅವರು ಭಾರತದೊಂದಿಗೆ ಹೊಂದಿರುವ ದ್ವಿಪಕ್ಷೀಯ ಒಪ್ಪಂದಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಇಂಡಿಯಾ-ರಷ್ಯಾ ಶೃಂಗಸಭೆಗೆಯಲ್ಲಿ ಭಾಗವಹಿಸುತ್ತಿರುವುದನ್ನು ಸ್ವಾಗತಿಸುತ್ತಿರುವುದಾಗಿ ಮೋದಿ ತಿಳಿಸಿದ್ದಾರೆ ಎಂದು ಹೇಳಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ರಷ್ಯಾ ಅಧ್ಯಕ್ಷರು ಶುಭಕೋರಿದ್ದಾರೆ.
'ವಿಶೇಷ ಮತ್ತು ಸವಲತ್ತು ಕಾರ್ಯತಂತ್ರ ಸಹಭಾಗಿತ್ವ'ದ ಬಗ್ಗೆ ಉಭಯ ನಾಯಕರು ಸಹಮತ ಸೂಚಿಸಿದ್ದು, ಕೋವಿಡ್-19 ಬೆಳವಣಿಗೆಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ಮತ್ತು ಸಂಪರ್ಕ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಈಚೆಗೆ ರಷ್ಯಾದ ರಾಜಧಾನಿ ಮಾಸ್ಕೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭೇಟಿ ಬಗ್ಗೆ ಮಾತುಕತೆ ನಡೆಸಿದ್ದಾರೆಂದು ಎಂಇಎ ತಿಳಿಸಿದೆ.
ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಆಯೋಜಿಸಿದ್ದ 8 ದೇಶಗಳ ಶೃಂಗಸಭೆಯಲ್ಲಿ ಸಚಿವರಾದ ರಾಜನಾಥ್ ಸಿಂಗ್, ಎಸ್. ಜೈಶಂಕರ್ ಪ್ರತ್ಯೇಕ ಸಭೆಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ರಷ್ಯಾದ ನಿಯೋಗದೊಂದಿಗೆ ವಿವಿಧ ವಲಯಗಳ ಒಪ್ಪಂದಗಳ ಕುರಿತು ಮಾತುಕತೆ ನಡೆಸಿದ್ದರು.