ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೆಲವೊಂದು ನಿರ್ಣಯಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅಂಗೀಕರಿಸಿದೆ.
ಈವರೆಗೆ ಉತ್ತರ ಕೊರಿಯಾ ಮೇಲೆ ವಿಧಿಸಿರುವ ನಿರ್ಬಂಧಗಳ ಮೇಲ್ವಿಚಾರಣೆ ನಡೆಸುತ್ತಿರುವ ವಿಶ್ವಸಂಸ್ಥೆಯ ತಜ್ಞರ ಅವಧಿಯನ್ನು ಏಪ್ರಿಲ್ 2021ಕ್ಕೆ ವಿಸ್ತರಣೆ ಮಾಡುವುದು ಸೇರಿದಂತೆ ಹಲವಾರು ನಿರ್ಣಯಗಳನ್ನು ಈ ವೇಳೆ ಕೈಗೊಳ್ಳಲಾಯಿತು. ಸೋಮಾಲಿಯಾದಲ್ಲಿ ಜೂನ್ ಅಂತ್ಯದವರೆಗೆ ಹಾಗೂ ಆಫ್ರಿಕಾದ ಡಾರ್ಫರ್ನಲ್ಲಿ ಮೇ ಅಂತ್ಯದವರೆಗೆ ನಡೆಯಲಿರುವ ವಿಶ್ವಸಂಸ್ಥೆಯ ಕಾರ್ಯಾಚರಣೆಗಳ ಬಗ್ಗೆಯೂ ಕೂಡಾ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಈ ನಿರ್ಣಯಗಳನ್ನು ತೆಗೆದುಕೊಳ್ಳಲು ಮಾರ್ಚ್ 12ರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸಲಾಗಿತ್ತು. ಅಮೆರಿಕದ ನ್ಯೂಯಾರ್ಕ್ನಲ್ಲಿ ಕೊರೊನಾ ಹಾವಳಿ ಸೃಷ್ಟಿಸಿರುವ ಕಾರಣದಿಂದಾಗಿ ವಿಡಿಯೋ ಕಾನ್ಫರೆನ್ಸ್ ಸಭೆಗಳ ಮೂಲಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಹರಡುವ ಭೀತಿಯಲ್ಲಿ ವಿಡಿಯೋ ಚರ್ಚೆಗಳು ಅತಿ ಮುಖ್ಯ ಎಂಬುದನ್ನು ಅರಿತ ವಿಶ್ವಸಂಸ್ಥೆ ಸುಮಾರು 75 ವರ್ಷಗಳ ನಂತರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಭದ್ರತಾ ಮಂಡಳಿಯ ಸದಸ್ಯರೂ ಕೂಡಾ ಈ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಹಾಗೂ ಪೂರ್ಣ ಸಹಕಾರ ನೀಡಲು ಒಪ್ಪಿಕೊಂಡಿದ್ದರು. ಹಾಗೆಯೇ ತಮ್ಮ ಮತಗಳನ್ನು ಆನ್ಲೈನ್ನಲ್ಲಿ ಚಲಾಯಿಸಲು ಅನುಮತಿ ಅನುಮತಿ ನೀಡಿದ್ದರು.
ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ವಿಡಿಯೋ ಕಾನ್ಫರೆನ್ಸ್ಗೆ ಒಪ್ಪಿಗೆ ನೀಡಿದ್ದರೂ ಕೂಡಾ ರಷ್ಯಾ ಇದಕ್ಕೆ ಒಪ್ಪಿರಲಿಲ್ಲ. ತನ್ನ ವಿಟೋ ಅಧಿಕಾರವನ್ನು ಉಪಯೋಗಿಸಿಕೊಂಡು ಕಾನೂನಾತ್ಮಕವಾಗಿ ಹಾಗೂ ರಾಜಕೀಯ ನೆಲೆಯಲ್ಲಿ ಈ ಹೊಸ ನೀತಿಯನ್ನು ವಿರೋಧಿಸಿತ್ತು. ಕೇವಲ ಔಪಚಾರಿಕ ಮಾತುಕತೆಗೆ ಮಾತ್ರ ರಷ್ಯಾ ಮೊದಲಿಗೆ ಅವಕಾಶ ನೀಡಿತ್ತು. ವಿವಾದಾತ್ಮಕ ವಿಚಾರಗಳಲ್ಲಿ ಈ ರೀತಿಯ ವಿಡಿಯೋ ಕಾನ್ಫರೆನ್ಸ್ ಅಷ್ಟೇನೂ ಅನುಕೂಲಕ್ಕೆ ಬರೋದಿಲ್ಲ ಎಂಬುದು ಅದರ ವಾದವಾಗಿತ್ತು. ಈಗ ಸದ್ಯಕ್ಕೆ ಕೆಲವು ವಿವಾದಾತ್ಮಕ ವಿಚಾರಗಳಲ್ಲದ ಸಮಸ್ಯೆಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ.