ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ದೂರವಿಟ್ಟು ಏಕಾಂಗಿ ಹೋರಾಡಲು ನಿರ್ಧರಿಸಿದ್ದ ಕಾಂಗ್ರೆಸ್ ಈಗ ತನ್ನ ನಿಲುವು ಬದಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.
ಕಾಂಗ್ರೆಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಅಚ್ಚರಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತಿವೆ ಮೂಲಗಳು. ಸಮೀಕ್ಷೆಯಲ್ಲಿ ಆಪ್ ಹಾಗೂ ಕಾಂಗ್ರೆಸ್ಗಿಂತ ಬಿಜೆಪಿ ಮತ ಬ್ಯಾಂಕ್ ಹೆಚ್ಚಿದೆಯಂತೆ. ಅದಕ್ಕಾಗಿ ಎರಡೂ ಪಕ್ಷ ಮತ್ತೆ ಮೈತ್ರಿ ಮಾಡಿಕೊಂಡರೆ, ಬಿಜೆಪಿ ಬೇಸ್‌ನ ಅಲುಗಾಡಿಸಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.
ದೆಹಲಿಯಲ್ಲಿ ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಆಪ್ಗೆ ಶೇ.28 ಹಾಗೂ ಕಾಂಗ್ರೆಸ್ ಶೇ. 22ರಷ್ಟು ಮತಬ್ಯಾಂಕ್ ಹೊಂದಿವೆ. ಆದರೆ, ಬಿಜೆಪಿಗೆ ಶೇ. 35ರಷ್ಟು ವೋಟ್‌ಬ್ಯಾಂಕ್ ಇದೆಯಂತೆ. ಆಪ್ ಹಾಗೂ ಕಾಂಗ್ರೆಸ್ ಒಟ್ಟುಗೂಡಿದರೆ, ದೆಹಲಿಯ 7 ಲೋಕಸಭೆ ಕ್ಷೇತ್ರಗಳನ್ನು ಸುಲಭವಾಗಿ ತೆಕ್ಕೆಗೆ ಹಾಕಿಕೊಳ್ಳಬಹುದು ಎಂದು ಕೈ ನಾಯಕರು ತಂತ್ರ ಹೆಣೆದಿದ್ದಾರೆ.
ಈ ಬಗ್ಗೆ ಆಪ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮತ್ತೊಮ್ಮೆ ಪರಿಗಣಿಸಬೇಕು ಅಂತ ದೆಹಲಿಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ರಿಗೆ ಮನವಿ ಮಾಡಿದ್ದಾರೆ. ಆಪ್ನೊಂದಿಗೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಕೂಡಾ ಪಕ್ಷದ ನಾಯಕರ ನಿರ್ಧಾರಕ್ಕೆ ತಾನೂ ಬದ್ಧ ಎಂದಿದ್ದಾರೆ.
ರಾಹುಲ್ ಕೂಡ ಶಕ್ತಿ ಆ್ಯಪ್ ಮೂಲಕ ಮೈತ್ರಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವೇನು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ದೆಹಲಿಯ ಕಾಂಗ್ರೆಸ್ ಉಸ್ತುವಾರಿ ಪಿಸಿ ಚಾಕೋ ಎಲ್ಲ ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಹಾಗೂ ಗುಲಾಂ ನಬಿ ಆಜಾದ್ ಅವರು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರ ಸಂಪರ್ಕದಲ್ಲಿದ್ದಾರೆ ಎಂದೂ ತಿಳಿದುಬಂದಿದೆ.
ಎಲ್ಲವೂ ಅಂದುಕೊಂಡಂತಾದರೆ ದೆಹಲಿ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್ ಮತ್ತು ಆಪ್ ಮೈತ್ರಿ ಆಗೋದು ಪಕ್ಕಾ.