ಜೈಪುರ: ಪ್ರಸ್ತುತ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಯಾಗಿದ್ದರೆ, ನಮ್ಮ ಭಾವಚಿತ್ರಗಳು ಗೋಡೆಗಳ ಮೇಲೆ ತೂಗಾಡುತ್ತಿದ್ದವು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಕೇಂದ್ರ ಸಚಿವರು, ಕಾಂಗ್ರೆಸ್ ಆಡಳಿತದ ರಾಜ್ಯಗಳು ರೈತರ ಮೇಲೆ ಮಲತಾಯಿ ಧೋರಣೆ ತೋರುತ್ತಿವೆ ಎಂದಿದ್ದಾರೆ. ಪಂಚಾಯಿತಿ ಮಟ್ಟದಲ್ಲಿ ಬೆಳೆ ಖರೀದಿ ಪ್ರಾರಂಭವಾಗಿಲ್ಲ. ರಾಜ್ಯ ಸರ್ಕಾರ ಇನ್ನೂ ಖಾರಿಫ್ ಬೆಳೆ ಸಬ್ಸಿಡಿಯನ್ನು ಬಿಡುಗಡೆ ಮಾಡಿಲ್ಲ, ಇದು ರೈತರಿಗೆ ಹೆಚ್ಚಿನ ತೊಂದರೆಗಳನ್ನುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಖರೀದಿ ಕೇಂದ್ರಗಳಿಂದಾಗಿ ಗೋಧಿ, ಸಾಸಿವೆ ಮತ್ತು ಕಡಲೆ ಸಂಗ್ರಹಣೆ ಪ್ರಾರಂಭವಾಗಿಲ್ಲ. ರಾಜ್ಯದ 11,341 ಪಂಚಾಯಿತಿಗಳಲ್ಲಿ 719 ಖರೀದಿ ಕೇಂದ್ರಗಳು ಬೆಳೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದಿದ್ದಾರೆ. ಇತರ ರಾಜ್ಯಗಳು ಖಾರಿಫ್ ಬೆಳೆ ಖರೀದಿಯನ್ನು ಪ್ರಾರಂಭಿಸಿದ್ರೆ, ರಾಜಸ್ಥಾನ ಮಾತ್ರ ಹಿಂದುಳಿದಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ರಾಜಸ್ಥಾನದತ್ತ ಗಮನ ಹರಿಸಬೇಕು. ಗೆಹ್ಲೋಟ್ ಸರ್ಕಾರ ನೌಕರರ ವೇತನದಲ್ಲಿ ಕಡಿತವನ್ನು ಘೋಷಿಸಿದಾಗ ಅವರು ಮೌನವಾಗಿದ್ದರು. ಆದರೆ ಕೇಂದ್ರದ ಕ್ರಮವನ್ನು ಪ್ರಶ್ನೆ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.