ಮುಂಬೈ: ಅಂಡರ್-19 ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕರಾಗಿರುವ ರಾಹುಲ್ ದ್ರಾವಿಡ್‌ಗೆ ಭಾರತೀಯ ಕ್ರಿಕೆಟ್ ಮಂಡಳಿ ನೋಟಿಸ್ ಜಾರಿ ಮಾಡಿರೋದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದೇ ವಿಷಯದ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಕ್ಲೀನ್ ಚಿಟ್ ನೀಡಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕರಾಗಿರುವ ರಾಹುಲ್ ದ್ರಾವಿಡ್ ಇಂಡಿಯಾ ಸಿಮೆಂಟ್ನ ಉಪಾಧ್ಯಕ್ಷರಾಗಿರುವ ಕಾರಣ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿತ್ತು. ಎರಡು ವಾರಗಳಲ್ಲಿ ಇದಕ್ಕೆ ಉತ್ತರ ನೀಡುವಂತೆ ತಿಳಿಸಲಾಗಿತ್ತು. ಬಿಸಿಸಿಐನ ಒಂಬುಡ್ಸ್‌ಮನ್ ಹಾಗೂ ಎಥಿಕ್ಸ್ ಆಫಿಸರ್ ಆಗಿರುವ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್, ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ (ಎಂಪಿಸಿಎ) ಅಜೀವ ಸದಸ್ಯರಾದ ಸಂಜೀವ್ ಗುಪ್ತ ಅವರು ನೀಡಿರುವ ದೂರಿನ ಆಧಾರದ ಮೇರೆಗೆ ನೋಟಿಸ್ ನೀಡಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕ್ರಿಕೆಟ್ ಸಲಹಾ ಸಮಿತಿ ಮಾಹಿತಿ ನೀಡಿದ್ದು, ನಾವು ಅವರ ನೇಮಕಾತಿಯನ್ನ ಅನುಮೋದಿಸಿದ್ದೇವೆ. ಅವರ ಪ್ರಕರಣದಲ್ಲಿ ಯಾವುದೇ ರೀತಿಯ ಹಿತಾಸಕ್ತಿ ಸಂಘರ್ಷಗಳಿಲ್ಲ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಾಹಿತಿ ಕೇಳಿದರೆ ನಾವು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಗಂಗೂಲಿ, ಭಾರತೀಯ ಕ್ರಿಕೆಟ್ನಲ್ಲಿ ಹೊಸ ಫ್ಯಾಷನ್ವೊಂದು ಆರಂಭಗೊಂಡಿದ್ದು, ಅದು ಸ್ವಹಿತಾಸಕ್ತಿಯ ಸಂಘರ್ಷ. ದೇವರೇ ಭಾರತೀಯ ಕ್ರಿಕೆಟ್ಗೆ ಸಹಾಯ ಮಾಡಬೇಕು. ದ್ರಾವಿಡ್‌ಗೆ ಬಿಸಿಸಿಐ ನೀತಿ ಸಂಹಿತೆ ಅಧಿಕಾರಿಯಿಂದ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಬಂದಿದೆ ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.