ನವದೆಹಲಿ: ಕೋವಿಡ್19 ನಿಂದಾಗಿ ದೇಶದಲ್ಲಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಿಂದಲೂ ಎಚ್ಚೆತ್ತಿರುವ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮರುಪಾವತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮೂಲಕ ತೆರಿಗೆದಾರರ ನೆರವಿಗೆ ಧಾವಿಸಿದೆ.
ಸ್ಟಾರ್ಟ್ ಅಪ್, ಕಂಪನಿಗಳು ಮತ್ತು ಸಾಮಾನ್ಯ ತೆರಿಗೆದಾರರು ಸೇರಿ ಒಟ್ಟು 1.72 ಲಕ್ಷ ಮಂದಿಗೆ ಇ-ಮೇಲ್ ಸಂದೇಶ ರವಾನಿಸಿದ್ದು, ತೆರಿಗೆ ಬಾಕಿ ಉಳಿಸಿಕೊಂಡಿರುವವರು, ಆದಾಯ ತೆರಿಗೆ ಮರುಪಾವತಿ ಕೋರಿದವರು ಮಾಹಿತಿ ನೀಡುವಂತೆ ಸೂಚಿಸಿದೆ.
ಈಗಾಗಲೇ 14 ಲಕ್ಷ ಮಂದಿ ತೆರಿಗೆದಾರರಿಗೆ 9 ಸಾವಿರ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಿದೆ. ಇದರಲ್ಲಿ ಸಾಮಾನ್ಯ ತೆರಿಗೆದಾರರು, ಹಿಂದೂ ಅವಿಭಜಿತ ಕುಟುಂಬಗಳು (ಹೆಚ್‌ಯುಎಫ್), ಮಾಲೀಕರು, ಕಂಪನಿಗಳು, ಕಾರ್ಪೋರೇಟ್, ಸ್ಟಾರ್ಟ್‌ಅಪ್ಸ್, ಸಣ್ಣ ಮತ್ತು ಮಾಧ್ಯಮ ಉದ್ಯಮಿದಾರರು (ಎಂಎಸ್‌ಎಂಇ) ಸೇರಿದ್ದಾರೆ.
ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಗೊಂದಲಗಳಾಗದಂತೆ ನಿರ್ವಹಿಸಬೇಕಿದೆ. ಹೀಗಾಗಿ ತೆರಿಗೆ ಮರುಪಾವತಿ ಕೋರಿದವರು, ತೆರೆಗೆ ಬಾಕಿ ಉಳಿಸಿಕೊಂಡಿರುವವರು ಸರಿಯಾದ ಮಾಹಿತಿ ನೀಡಬೇಕು ಎಂದು ಇ-ಮೇಲ್ ಸಂದೇಶದಲ್ಲಿ ಸಿಬಿಡಿಟಿ ತಿಳಿಸಿದೆ. ಒಂದು ವೇಳೆ ತೆರಿಗೆ ಪಾವತಿ ಮಾಡಿದ್ದರೆ ಅಥವಾ ಮರುಪಾವತಿಯ ಹಣವನ್ನು ಪಡೆದಿದ್ದರೆ ಆ ಬಗ್ಗೆಯೂ ತಿಳಿಸುವಂತೆ ಸೂಚಿಸಿದೆ.