ಲಾತೇಹಾರ್ (ಜಾರ್ಖಂಡ್): ಕೊರೊನಾ ಸೋಂಕು ವಿಶ್ವವನ್ನೇ ಆವರಿಸಿದೆ. ದೇಶದಲ್ಲೂ ವೇಗವಾಗಿ ಹರಡುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇವೆಲ್ಲದರ ನಡುವೆ ಬೇರೊಂದು ಜೀವನ ವಿಧಾನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಕೂಡಾ ಜನರಲ್ಲಿದೆ.
ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರದಲ್ಲೂ ಕೂಡಾ ಅಮೂಲಾಗ್ರ ಬದಲಾವಣೆಗಳಾಗುತ್ತಿವೆ. ಆನ್ಲೈನ್ ಶಿಕ್ಷಣದತ್ತ ಎಲ್ಲರೂ ತಮ್ಮ ಒಲವು ತೋರುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಕೊರೊನಾ ಸಂಕಷ್ಟದ ವೇಳೆ ಆನ್ಲೈನ್ ಶಿಕ್ಷಣ ಪಡೆಯಲಿ ಎಂಬ ಕಾರಣಕ್ಕೆ ಸರ್ಕಾರಗಳು ಕೂಡಾ ಆನ್ಲೈನ್ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿವೆ. ಆದರೆ ಜಾರ್ಖಂಡ್ನ ಲಾತೇಹಾರ್ ಜಿಲ್ಲೆ ಇದಲ್ಲೆಕ್ಕೂ ವ್ಯತಿರಿಕ್ತ.
ದಶಕಗಳ ಹಿಂದಿನಿಂದಲೂ ಕೂಡಾ ಈ ಜಿಲ್ಲೆಯಲ್ಲಿ ನಕ್ಸಲಿಸಂ ಬೇರುಬಿಟ್ಟಿತ್ತು. ಇದೇ ಕಾರಣಕ್ಕೆ ಈ ಜಿಲ್ಲೆ ಅಷ್ಟೇನೂ ಅಭಿವೃದ್ಧಿ ಕಾಣಲಿಲ್ಲ. ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಹುಪಾಲು ಮಂದಿ ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಇತ್ತೀಚೆಗೆ ನಕ್ಸಲಿಸಂ ಕ್ಷೀಣಿಸುತ್ತಿದ್ದು, ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರಗಳು ಪ್ರಯತ್ನಿಸಿದ್ದವು. ಕೊರೊನಾ ಮಹಾಮಾರಿ ಇದೆಲ್ಲಕ್ಕೂ ಅಡ್ಡಿ ಮಾಡಿದೆ.
ಲಾತೇಹಾರ್ ಜಿಲ್ಲೆಯಲ್ಲಿ ಸುಮಾರು 1,234 ಶಾಲೆಗಳಿದ್ದು, 1.49 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಲಾಕ್ಡೌನ್ ಭೂತ ಕಾಡ್ತಿದ್ದು, ಬಹುತೇಕರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ನಗರ ಪ್ರದೇಶಗಳಲ್ಲೂ ಸಮಸ್ಯೆ ಇದೆಯಾದರೂ ಕೂಡಾ ಗ್ರಾಮೀಣ ಪ್ರದೇಶದವರನ್ನು ಹೆಚ್ಚಾಗಿ ಕಾಡುತ್ತಿದೆ. ಅಂತರ್ಜಾಲ ಸಮಸ್ಯೆ ಮಾತ್ರವಲ್ಲ. ಕನಿಷ್ಠ ಒಂದು ಮೊಬೈಲ್ ಅನ್ನು ಕೊಳ್ಳಲೂ ಕೂಡಾ ಸಾಧ್ಯವಾಗದ ಸ್ಥಿತಿಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿದ್ದಾರೆ.
ಸರ್ಕಾರದ ಮಾಹಿತಿ ಪ್ರಕಾರ ಶೇಕಡಾ 27ರಷ್ಟು ವಿದ್ಯಾರ್ಥಿಗಳು ಮಾತ್ರ ಆನ್ಲೈನ್ ಶಿಕ್ಷಣದಲ್ಲಿ ಭಾಗಿಯಾಗುತ್ತಿದ್ದಾರೆ. ಉಳಿದವರು ಮತ್ತೊಮ್ಮೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೇಶದ ಪ್ರತಿಯೊಂದು ಗ್ರಾಮದ ಕತೆಯೂ ಲಾತೇಹಾರ್ಗಿಂತ ವಿಭಿನ್ನವೇನಲ್ಲ. ಪ್ರಸ್ತುತ ಆನ್ಲೈನ್ ಶಿಕ್ಷಣಕ್ಕೆ ಒಲವು ತೋರುತ್ತಿರುವ ಸರ್ಕಾರಗಳು ಹಾಗೂ ಆನ್ಲೈನ್ ಶಿಕ್ಷಣಕ್ಕೆ ಜೋತುಬೀಳುತ್ತಿರುವ ವಿದ್ಯಾಸಂಸ್ಥೆಗಳು, ಗ್ರಾಮೀಣ ವಿದ್ಯಾರ್ಥಿಗಳಿಗೆ ಹೇಗೆ ಕಲಿಸುತ್ತವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.