ವಿದ್ಯಾರ್ಥಿ ಜೀವನದಲ್ಲಿ ಓದಲೇಬೇಕು... ಈಗ ಪಡೆಯೋ ಶಿಕ್ಷಣವೇ ಮುಂದಿನ ಜೀವನದ ಮಾರ್ಗದರ್ಶಿ. ಅಂದ ಹಾಗೆ ಓದದೆಯೇ ಅಡ್ಡದಾರಿ ಹಿಡಿದು ಉತ್ತಮ ಸ್ಥಾನಕ್ಕೆ ಬರಬೇಕು ಎನ್ನುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಎಸ್ಎಸ್ಎಲ್ಸಿಯಿಂದ ಹಿಡಿದು ಪಿಹೆಚ್‌ಡಿವರೆಗೂ ಯಾವುದೇ ಪ್ರಮಾಣ ಪತ್ರವನ್ನ ಈಗ ದುಡ್ಡಿದ್ದರೆ ಸುಲಭವಾಗಿ ಪಡೆಯಲೇಬೇಕು. ಶಿಕ್ಷಣ ಎನ್ನುವುದು ಈಗ ಮಾರುಕಟ್ಟೆಯ ಸರಕು ಎಂಬಂತಾಗಿದೆ.
ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ಓದುವುದು. ಶೇ.100ರಷ್ಟು ಹಾಜರಾತಿ, ಉತ್ತಮ ಅಂಕ ಗಳಿಸಿ, ಡಿಗ್ರಿಗಳನ್ನು ಕೈಯಲ್ಲಿಟ್ಟುಕೊಂಡು ಸರ್ಕಾರಿ ಉದ್ಯೋಗಕ್ಕಾಗಿ ಬಹುತೇಕರು ತಯಾರಿ ನಡೆಸುತ್ತಾರೆ. ಇಷ್ಟೆಲ್ಲ ಮಾಡಲು ತಾಳ್ಮೆ ಇಲ್ಲದವರು ಮಾತ್ರ ಅಡ್ಡ ದಾರಿ ಹೀಡಿತಾರೆ. ಇಂತಹವರಿಗಾಗಿಯೇ ಹಾಜರಾತಿ, ಅಂಕಗಳು, ಡಿಗ್ರಿಗಳನ್ನು ನೀಡಲು ಅಂಗಡಿಗಳು ಸಿದ್ಧವಾಗಿದ್ದು, ಇವುಗಳನ್ನ ಸರಕುಗಳಂತೆ ಖರೀದಿಸುವ ವ್ಯವಸ್ಥೆ ಸಮಾಜದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಅದಕ್ಕೆ ಸಹಕರಿಸುವಂಥ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿದ್ದು, ಹಣ ಗಳಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡಿವೆ. ಈ ರಕ್ಕಸರ ಹಾವಳಿಯಿಂದ ಪ್ರಾಮಾಣಿಕರು ಯಾರಿಗೂ ಕಾಣದಾಗೆ ಬಾಡಿಹೋಗುತ್ತಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ ಉದ್ಯಮವಾಗಿಸಿಕೊಂಡ ಶಿಕ್ಷಣ ಸಂಸ್ಥೆಗಳು ದೇಶದ ಮೂಲೆ ಮೂಲೆಯಲ್ಲೂ ಸಿಗುತ್ತವೆ. ಸಹಿಯೊಂದಕ್ಕೆ ₹10-15 ಸಾವಿರ ಕೈಯಲ್ಲಿಟ್ಟರೆ ಕ್ಷಣ ಮಾತ್ರದಲ್ಲಿ ಬೇಕಾದ ಸರ್ಟಿಫಿಕೇಟ್ ಕೈ ಸೇರುತ್ತದೆ. ಡಿಗ್ರಿ, ಪಿಜಿ, ಎಂಜಿನಿಯರಿಂಗ್ ಸರ್ಟಿಫಿಕೇಟ್ಗೆ ₹20-75 ಸಾವಿರದವರೆಗೂ ಬೇಡಿಕೆಯಿದೆ. ಇದಕ್ಕೆ ಮೊದಲೇ ದರ ನಿಗದಿಯಾಗಿರುತ್ತದೆ. ಅಲ್ಲದೇ, ಬಡ ವಿದ್ಯಾರ್ಥಿಗಳೊಂದಿಗೆ ಕಿತ್ತು ತಿನ್ನುವ ಲಂಚಕೋರರು ಹೆಚ್ಚಾಗಿ ಕೊರಿಯರ್ ಮೂಲಕ ವ್ಯವಹಾರ ನಡೆಸುತ್ತಾರೆ. ಅಷ್ಟೇ ಅಲ್ಲದೆ, ಎಷ್ಟೋ ಕಡೆ ಸರ್ಕಾರದ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದಿದೆ.
ಯಾವುದೇ ವಿಶ್ವವಿದ್ಯಾಲಯದಲ್ಲಿ ಆಗಲಿ ನೀಡುವ ಗಡುವಿನೊಳಗೆ ಬೇಕಾದ ಪ್ರಮಾಣ ಪತ್ರ ಕೈಸೇರುತ್ತದೆ. ವರ್ಷದ ಹಿಂದೆ ತೆಲುಗು ರಾಜ್ಯಗಳಲ್ಲಿ ನೂರಾರು ಸಲಹೆಗಾರರ ಮೂಲಕ ವಿವಿಧ ರಾಜ್ಯಗಳ ಖಾಸಗಿ ವಿಶ್ವವಿದ್ಯಾಲಯಗಳಿಂದ ಪಿಹೆಚ್‌ಡಿ ಪದವಿಗಳನ್ನು ಖರೀದಿಸಿದ ಗಂಭೀರ ಆರೋಪಗಳು ಕೇಳಿಬಂದವು. ನಕಲಿ ಪ್ರಮಾಣಪತ್ರಗಳೊಂದಿಗೆ ಆಚಾರ್ಯ ಪೀಠಕ್ಕೆ ಪ್ರವೇಶಿಸಿದವರ ಸಂಪೂರ್ಣ ವರದಿ ನೀಡುವಂತೆ ಶಿಕ್ಷಣ ಇಲಾಖೆಗೆ ಗವರ್ನರ್ ಸೂಚಿಸಿದ್ದರೂ ಈ ಅಕ್ರಮ ಬೆಳಕಿಗೆ ಬಂದಿರಲಿಲ್ಲ. ಆದರೆ, 'ಈನಾಡು-ಈಟಿವಿ' ನಡೆಸಿದ ಪರಿಶೋಧನೆಯಲ್ಲಿ ಏಜೆಂಟ್ಗಳ ಮೂಲಕ ಪಿಹೆಚ್‌ಡಿ ಪಡೆದ ಕತ್ತಲ ಸಾಮ್ರಾಜ್ಯ ಬೆಳಕಿಗೆ ಬಂದಿದೆ.
ಅಣ್ಣಾಮಲೈ (ತಮಿಳುನಾಡು) ವಿವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್‌ಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದವರಿಗೆ ಸಹಾಯ ಮಾಡುವುದಾಗಿ ಹತ್ತು ಬೋಧಕ ವರ್ಗ ಮತ್ತು ಸಾರ್ವತ್ರಿಕ ಪದವಿ ಪೂರ್ವ ಕಾಲೇಜುಗಳ ಜೊತೆ ಸಮಾಲೋಚನೆ ನಡೆಸಿದ ಉದಾಹರಣೆಗಳೂ ಇವೆ. ಎಂ.ಟೆಕ್ ವಿದ್ಯಾರ್ಥಿಗೆ ಪಿಹೆಚ್.ಡಿ ಕೊಡಬಹುದಾ ಎಂಬ ಪ್ರಶ್ನೆಗೆ ಉತ್ತರಪ್ರದೇಶದ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದ ಹೆಸರು ಬಯಲಿಗೆ ಬಂತು. ಸಂಶೋಧನಾ ವಿದ್ಯಾರ್ಥಿ ಯಾರ ಮಾರ್ಗದರ್ಶನ ಇಲ್ಲದೇ ಆರಂಭದಿಂದ, ಮಂಡಿಸಿದ ವಿಷಯ ಸಲ್ಲಿಸುವವರೆಗೂ ಹಣ ಸುರಿದಿದ್ದ. ಅದು ಕೇವಲ ಆರು ತಿಂಗಳಲ್ಲಿ ಮುಕ್ತಾಯಗೊಂಡಿತ್ತು. ಬೇರೆ ವಿಷಯಗಳಿಗೆ ಅಷ್ಟೂ ಖರ್ಚಾಗುವುದಿಲ್ಲ. ಗುಟ್ಟು ರಟ್ಟಾಗುತ್ತಿದ್ದಂತೆ ಹೈದರಾಬಾದ್ ದಂಧೆಗಳೂ ಬಹಿರಂಗವಾದವು. ಇಂಥ ಸಂಸ್ಥೆಗಳು ಇನ್ನೆಷ್ಟಿರಬಹುದು ನೀವೇ ಊಹಿಸಿ...
ಕಳೆದ ವರ್ಷ ಭಾಗ್ಯನಗರಂ, ಶಿವಾರ್ಲದ ವಿವಿಧ ಇಂಜಿನಿಯರ್ ಕಾಲೇಜ್ಗಳಲ್ಲಿ 40 ನಕಲಿ ಪಿಹೆಚ್.ಡಿ ಮೂಲಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸಂಚಲನ ಮೂಡಿಸಿತ್ತು. ಹಾಗಾಗಿ 2001-05ರ ನಡುವೆ ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡಿಗೆ ಸೇರಿದ 4 ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ನಕಲಿ ಪ್ರಮಾಣಪತ್ರ ಹೊಂದಿರುವ ಪ್ರಾಧ್ಯಾಪಕರು ಕೆಲಸ ನಿರ್ವಹಿಸಲು ಅರ್ಹರಲ್ಲ ಎಂದು ಜೆಎನ್ಟಿಯು (ಹೆಚ್) ಎಚ್ಚರಿಕೆ ನೀಡಿತ್ತು.
ತರಗತಿಗಳಿಗೆ ಹಾಜರಾಗದೇ, ಪರೀಕ್ಷೆಗಳನ್ನೇ ಬರೆಯದೇ ನಕಲಿ ಪತ್ರಗಳನ್ನು ನೀಡುವ ಆಂಧ್ರ ವಿಶ್ವವಿದ್ಯಾಲಯದ (ವಿಶಾಖ) ಹೆಸರು ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ದೆಹಲಿ, ಪಂಜಾಬ್, ಹರಿಯಾಣ, ಯಶ್ವಂತರಾವ್ ಚೌಹಾಣ್ ಓಪನ್ ಯೂನಿವರ್ಸಿಟಿ (ಮಹಾರಾಷ್ಟ್ರ), ಸೋಲಾಪುರ್ ವಿಶ್ವವಿದ್ಯಾಲಯ, ರಾಜಸ್ಥಾನ, ಛತ್ತೀಸ್ಗಢ, ಅರುಣಾಚಲ ಪ್ರದೇಶದ ಮೂರು ವಿಶ್ವವಿದ್ಯಾಲಯಗಳು ಆ ಪಟ್ಟಿಗೆ ಸೇರಿದವು. ಸಿನಾಪ್ಸಿಸ್, ಥೀಸಿಸ್ ಸೇರಿದಂತೆ ಎಲ್ಲವನ್ನೂ ಆಂಧ್ರ ವಿವಿಯಿಂದ ಪಿಹೆಚ್‌ಡಿ ಪದವಿ ಹಾಗೂ ₹ 2 ಲಕ್ಷ ಕೊಟ್ರೆ ಯುಪಿ ವಿವಿಯಲ್ಲಿ ಡಿಗ್ರಿ ಸರ್ಟಿಫಿಕೇಟ್ ಅನ್ನು ಮುಂಬೈನ ಗ್ಯಾಂಗೊಂದು ನೀಡುತ್ತೆ. ಇಷ್ಟೆಲ್ಲವೂ ನಡೆಯುತ್ತದೆ ಅಂದರೆ ಅದರಲ್ಲಿ ಸರ್ಕಾರದ ಅಧಿಕಾರಿಗಳ ಪಾತ್ರಗಳ ಬಗ್ಗೆಯೂ ಚಿಂತನೆ ಮಾಡಬೇಕಾದದ್ದೇ.
2010-11ರ ಅಂಕಿ-ಅಂಶಗಳ ಪ್ರಕಾರ 78 ಸಾವಿರ ಪಿಹೆಚ್‌ಡಿ ಅಭ್ಯರ್ಥಿಗಳಿದ್ದರು. ಅದೀಗ 60 ಲಕ್ಷ ಮುಟ್ಟಿದೆ. ರಾಷ್ಟ್ರವ್ಯಾಪಿ ನಕಲಿ ಪಿಹೆಚ್.ಡಿ ಪದವಿ ಕಾಟೇಜ್ ಉದ್ಯಮವಾಗಿ ಮಾರ್ಪಟ್ಟಿದೆ. ಅಲ್ಲದೆ, ರಾಜಸ್ಥಾನದಲ್ಲಿ ಪಿಹೆಚ್‌ಡಿ ಪ್ರವೇಶ ಮಾಡುವವರ ಸಂಖ್ಯೆ ಶೇ.70ರಷ್ಟು ಏರಿದೆ. ಅಲ್ಲಿನ ನಾಲ್ಕು ಖಾಸಗಿ ವಿವಿಗಳು ಕೆಲ ವರ್ಷಗಳಿಂದ ನೀತಿ-ನಿಯಮಗಳನ್ನು ಮೂಲೆಗುಂಪು ಮಾಡಿ ಮನಬಂದಂತೆ ಪದವಿಗಳನ್ನು ಮಾರಾಟ ಮಾಡುತ್ತಿದ್ದರು. ಹಾಜರಾತಿ ಪಟ್ಟಿ ಇಲ್ಲ, ಸಂಶೋಧನಾ ವರದಿ ಇರಲಿಲ್ಲ ಎಂಬುದು ಉನ್ನತ ಅಖಿಲ ಭಾರತ ಅಧ್ಯಯನ ಬಹಿರಂಗಪಡಿಸಿತ್ತು. ಮಧ್ಯಪ್ರದೇಶದ ಬರ್ಕತುಲ್ಲಾ ವಿಶ್ವವಿದ್ಯಾಲಯ 20 ನಕಲಿ ಪಿಹೆಚ್.ಡಿಗಳನ್ನು ಪ್ರಕಟಿಸಿತ್ತು. ಈ ಮಹಾಮೋಸದಿಂದಾಗಿ ಪ್ರಾಮಾಣಿಕ ವಿದ್ಯಾರ್ಥಿಗಳು ಯಾರೂ ಕೇಳದ ವಸ್ತುವಾಗಿದ್ದಾರೆ.
ಆರು ತಿಂಗಳ ಹಿಂದೆ ಗುಡಿವಾಡದಲ್ಲಿ ಬಿ.ಟೆಕ್, ಡಿಪ್ಲೋಮಾ, ಕಾನೂನು ಪದವಿಗಳ ನಕಲಿ ಸರ್ಟಿಫಿಕೇಟ್ ನೀಡುತ್ತಿದ್ದ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ. ಬಿಹಾರದ ಮಗಧ ವಿವಿ 40 ಮಂದಿಗೆ ನಕಲಿ ಪಿಹೆಚ್.ಡಿ ಪ್ರಧಾನ ಮಾಡಿತ್ತು. ಪದವಿ ಪಡೆದವರು ಥಾಯ್ಲೆಂಡ್ಗೆ ಹಾರಿದ್ದರು. ಅದನ್ನ ತಿಳಿದ ಅಲ್ಲಿನ ಸರ್ಕಾರ ಅವರ ಪ್ರಮಾಣಪತ್ರಗಳನ್ನು ರದ್ದುಪಡಿಸಿತ್ತು. ನಕಲಿ ಪದವಿ ಪ್ರಮಾಣ ಪತ್ರ ಆರೋಪಕ್ಕೆ ಸಂಬಂಧಿಸಿದಂತೆ ನೇಪಾಳ ಸರ್ಕಾರ 2016ರಲ್ಲಿ 35ಮಂದಿಯನ್ನು ಉದ್ಯೋಗದಿಂದ ಕಿತ್ತು ಹಾಕಿತ್ತು. ಈ ಪಾಟಿ ನಡೆಯುತ್ತಿರುವ ಅಕ್ರಮಗಳ ತಡೆಯಲು ಸರ್ಕಾರಗಳು ಮುಂದಾಗದೆ ಕೈ ಕಟ್ಟಿ ಕೂತಿರುವುದು ಪ್ರಾಮಾಣಿಕ ವಿದ್ಯಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ. ಈ ದಂಧೆ ಈಗಲೂ ಜೀವಂತವಾಗಿದೆ. ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಗಳು ಮುಂದಾಗಬೇಕಿದೆ. ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.
- ಬಾಲು