ಪಾಟ್ನಾ: ಪಾಟ್ನಾ ವಿಶ್ವವಿದ್ಯಾಲಯದ ವಾರ್ಡನ್ ಮಧ್ಯರಾತ್ರಿ ವಿದ್ಯಾರ್ಥಿನಿಯರಿಗೆ ಫೋನ್ ಮಾಡಿ ಅಸಭ್ಯವಾಗಿ ಮಾತನಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಮಧ್ಯರಾತ್ರಿ ಹುಟ್ಟುಹಬ್ಬದ ವಿಶ್ ಮಾಡಿರುವ ವಾರ್ಡನ್ ಮೊಬೈಲ್ ಸಂದೇಶ ರವಾನಿಸಿದ್ದಾನೆ. ತದನಂತರ ಮೇಲಿಂದ ಮೇಲೆ ಮೆಸೇಜ್ ಮಾಡುತ್ತಿದ್ದ ಎಂಬ ಮಾಹಿತಿಯನ್ನ ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಜತೆಗೆ ಕಳೆದೆರಡು ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ಫೋನ್ ಮಾಡಿ ಮನೆಯಲ್ಲಿ ಹೆಂಡತಿ ಇಲ್ಲ, ಬಂದು ಅಡುಗೆ ಮಾಡಿಕೊಡು ಎಂದು ಹೇಳಿದ್ದಾನೆ ಎಂದೂ ಹೇಳಿದ್ದಾರೆ. ಈ ಮಾತು ಕೇಳಿ ವಿದ್ಯಾರ್ಥಿನಿ ಫೋನ್ ಕಟ್ ಮಾಡಿದ್ದಾಳೆ. ಇದಾದ ಮೇಲೂ ಆತ ಫೋನ್ ಮಾಡಿದ್ದಾನೆ ಎಂಬುದನ್ನು ದಾಖಲೆ ಸಮೇತವಾಗಿ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ವಿವಿ ಆಡಳಿತ ಮಂಡಳಿ, ಈಗಾಗಲೇ ನಾವು ಆತನನ್ನು ವಾರ್ಡನ್ ಕೆಲಸದಿಂದ ಕಿತ್ತು ಹಾಕಿದ್ದೇವೆ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ರೀತಿಯ ತನಿಖೆ ನಡೆಸುವಂತೆ ರಾಜ್ಯಪಾಲರು ವಿವಿ ಕುಲಪತಿಗಳಿಗೆ ಸೂಚನೆ ನೀಡಿದ್ದು, ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.