ನವದೆಹಲಿ: ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿದ್ದವು. ಇದಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಯಿತು.
ಕೇಂದ್ರಕ್ಕೆ ಹಾಜರಾದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ರೈತರಿಂದ ಟ್ರಾಕ್ಟರ್ ಮೆರವಣಿಗೆ ಕಾನೂನುಬಾಹಿರವಾಗಲಿದೆ ಎಂದರು. ಯಾವುದೇ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದೆ. ಇದನ್ನು ಪೊಲೀಸರು ನಿರ್ಧರಿಸುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಗಣರಾಜ್ಯೋತ್ಸವದಂದು ಉದ್ದೇಶಿತ ಟ್ರ್ಯಾಕ್ಟರ್ ಮೆರವಣಿಗೆಗೆ ತಡೆಯಾಜ್ಞೆ ನೀಡುವಂತೆ ನಿರ್ದೇಶನ ಕೋರಿ ದೆಹಲಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಬುಧವಾರ ಮುಂದೂಡಲಾಗಿದೆ. ಈ ಕುರಿತು ನ್ಯಾಯಾಲಯ ಈಗಾಗಲೇ ಜನವರಿ 12 ರಂದು ನೋಟಿಸ್ ನೀಡಿತ್ತು.
ತಮ್ಮ ಆಂದೋಲನವನ್ನು ಮುಂದುವರಿಸುವ ಬದ್ಧತೆ ವ್ಯಕ್ತಪಡಿಸಿದ ರೈತರು: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಸಂಘಗಳು ಭಾನುವಾರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ತಮ್ಮ ಉದ್ದೇಶಿತ ಟ್ರ್ಯಾಕ್ಟರ್ ಪೆರೇಡ್ ಅನ್ನು ಕೈಗೊಳ್ಳುವುದಾಗಿ ಹೇಳಿದ್ದು, ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ತಮ್ಮ ಆಂದೋಲನವನ್ನು ಮುಂದುವರೆಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
ಜನವರಿ 19 ರಂದು ನಡೆಯಲಿರುವ ಹೊಸ ಕೃಷಿ ಕಾನೂನುಗಳ ಕುರಿತು ಹತ್ತನೇ ಸುತ್ತಿನ ಮಾತುಕತೆ ನಡೆಸುವ ಮೊದಲು, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿದ್ದು, ರೈತ ಮುಖಂಡರಿಗೆ ಹೊಸ ಕೃಷಿ ಕಾನೂನುಗಳ ಬಗ್ಗೆ ತಮ್ಮ 'ಮೊಂಡುತನದ' ನಿಲುವನ್ನು ಬಿಟ್ಟು ಸಹಮತಕ್ಕೆ ಬನ್ನಿ ಎಂದಿದ್ದಾರೆ.
ಓದಿ: ರೈತರ ಪ್ರತಿಭಟನೆ: ಇಂದು ಉನ್ನತ ಮಟ್ಟದ ಸಮಿತಿ ರಚಿಸುವ ಸಾಧ್ಯತೆ, ಟ್ರ್ಯಾಕ್ಟರ್ ಪರೇಡ್ ಪೂರ್ವಾಭ್ಯಾಸ
ಇನ್ನು ಸಿಂಘು ಗಡಿಯಲ್ಲಿನ ಪ್ರತಿಭಟನಾ ಸ್ಥಳದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಯೋಗೇಂದ್ರ ಯಾದವ್, 'ಗಣರಾಜ್ಯೋತ್ಸವದಂದು ದೆಹಲಿಯ ಹೊರಗಿನ ರಿಂಗ್ ರಸ್ತೆಯಲ್ಲಿ ನಾವು ಟ್ರ್ಯಾಕ್ಟರ್ ರ‍್ಯಾಲಿ ಮಾಡುತ್ತೇವೆ. ಮೆರವಣಿಗೆ ಬಹಳ ಶಾಂತಿಯುತವಾಗಿರುತ್ತದೆ. ಗಣರಾಜ್ಯೋತ್ಸವದ ಮೆರವಣಿಗೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದಿದ್ದಾರೆ.