ಹಥ್ರಾಸ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ಮುಂದುವರೆದಿದ್ದು, ಸಿಬಿಐ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ.
ಸಂತ್ರಸ್ತ ಯುವತಿಗೆ ಚಿಕಿತ್ಸೆ ನೀಡಿದ ದಾಖಲೆಗಳನ್ನು ಪರಿಶೀಲನೆ ಮಾಡಿದ ಸಿಬಿಐ ಅಧಿಕಾರಿಗಳು ಸುಮಾರು ಒಂದು ಗಂಟೆ ಕಾಲ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮಂಗಳವಾರವಷ್ಟೇ ಮೃತ ಯುವತಿಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಬಿಐ ಅಧಿಕಾರಿಗಳು ಸುಮಾರು 6 ಗಂಟೆ ಕಾಲ ಅಲ್ಲಿ ತನಿಖೆ ಕೈಗೊಂಡಿದ್ದರು. ಅತ್ಯಾಚಾರ ನಡೆದ ಸ್ಥಳ ಹಾಗೂ ಆಕೆಯ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಅವರು ಯುವತಿಯ ಸಂಬಂಧಿಗಳ ಹೇಳಿಕೆಗಳನ್ನೂ ದಾಖಲಿಸಿಕೊಂಡರು.
ಮೂರು ದಿನಗಳಿಂದಲೂ ಹಥ್ರಾಸ್ನಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು ಉತ್ತರ ಪ್ರದೇಶ ಪೊಲೀಸರಿಂದಲೂ ಕೂಡಾ ಕೆಲವೊಂದು ದಾಖಲೆಗಳನ್ನು ಸಂಗ್ರಹಿಸಿ ತನಿಖೆ ಮುಂದುವರೆಸಿದ್ದಾರೆ.