ನವದೆಹಲಿ: ವೈದ್ಯರು, ಅರೆವೈದ್ಯ ಸಿಬ್ಬಂದಿಯನ್ನು ಬಾಡಿಗೆ ಮನೆಗಳಿಂದ ಹೊರಕಳಿಸಿದರೆ ಕಠಿಣ ಕ್ರಮಕೈಗೊಳ್ಳಲು ಪೂರ್ಣಾಧಿಕಾರವನ್ನು ವಲಯ ಉಪ ಆಯುಕ್ತರಿಗೆ ನೀಡಲಾಗಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ಮನೆಯಿಂದ ಹೊರಗೆ ಕಳಿಸುವ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ವಲಯ ಉಪ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ದೆಹಲಿ ಏಮ್ಸ್ನ ವೈದ್ಯರು ಈ ಕುರಿತು ಗೃಹಮಂತ್ರಿ ಅಮಿತ್ ಶಾಗೆ ಪತ್ರ ಬರೆದಿದ್ದರು. ತಮ್ಮ ಸಹೋದ್ಯೋಗಿಗಳನ್ನು ಬಾಡಿಗೆ ಮನೆಗಳಿಂದ ಮಾಲೀಕರು ಹೊರಹಾಕಿದ್ದಾರೆಂದು ಅಳಲು ತೋಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ದೆಹಲಿ ಪೊಲೀಸರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ ಇಂತಹ ಘಟನೆಗಳಿಂದ ಬೇಸರವಾಗುತ್ತಿದೆ. ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಬೇಕು. ವೈದ್ಯರು ಹಾಗೂ ಅರೆವೈದ್ಯರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.