ಮಲಪ್ಪುರಂ: ಶಾರ್ಜಾದಿಂದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಒಟ್ಟು 2.3 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನವು ಸುಮಾರು 90 ಲಕ್ಷ ರೂಪಾಯಿ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ. ವಿಮಾನ ನಿಲ್ದಾಣದ ಕಸ್ಟಮ್ಸ್ ಮೂಲಗಳ ಪ್ರಕಾರ, ಸುಮಾರು 1.650 ಕೆಜಿ ಚಿನ್ನವನ್ನು ಮಹಿಳಾ ಪ್ರಯಾಣಿಕರ ಒಳ ಉಡುಪಿನಲ್ಲಿ ಅಡಗಿಸಲಾಗಿತ್ತು ಮತ್ತು ಕ್ಯಾಪ್ಸುಲ್ಗಳ ರೂಪದಲ್ಲಿ 650 ಗ್ರಾಂ ಬಂಗಾರವನ್ನು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ಸಾಂಕ್ರಾಮಿಕ ರೋಗದ ಕಾರಣ ರದ್ದುಗೊಂಡಿದ್ದ ವಿಮಾನ ಸಂಚಾರ ಆರಂಭವಾಗಿದ್ದು, ಕೇರಳದ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕೊಲ್ಲಿ ರಾಷ್ಟ್ರಗಳ ಪ್ರಯಾಣಿಕರಿಂದ ಚಿನ್ನದ ಕಳ್ಳಸಾಗಣೆ ನಿಯಮಿತವಾಗಿ ನಡೆಯುತ್ತಲೇ ಇದೆ ಎನ್ನಲಾಗಿದೆ.