ಕಣ್ಣೂರು (ಕೇರಳ): ಇತ್ತೀಚೆಗೆ ರಾಜ್ಯದಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚು ಕೇಳಿ ಬರುತ್ತಿದ್ದು, ಇಂದು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 46 ಲಕ್ಷ ರೂ.ಗಳ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊಯಿಕ್ಕೋಡ್ ಮೂಲದ ಮಹಿಳೆಯೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಶಾರ್ಜಾದಿಂದ ಆಗಮಿಸಿದ ಈಕೆ ಬಟ್ಟೆಯೊಳಗೆ ಚಿನ್ನವನ್ನು ಅಡಗಿಸಿ ಸಾಗಿಸಲು ಯತ್ನಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬಂಧಿತ ಮಹಿಳೆಯಿಂದ ಸುಮಾರು 46 ಲಕ್ಷ ರೂ ಮೌಲ್ಯದ 883 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಇದೇ ರೀತಿ ಸೆಪ್ಟೆಂಬರ್ 28 ರಂದು ಇದೇ ವಿಮಾನ ನಿಲ್ದಾಣದಲ್ಲಿ ವಾಯು ಗುಪ್ತಚರ ಘಟಕವು ಸುಮಾರು 47.63 ಲಕ್ಷ ರೂ.ಗಳ 1.17 ಕೆಜಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿದ್ದ ಪ್ರಯಾಣಿಕನನ್ನು ಬಂಧಿಸಿದೆ ಎಂದು ಕೊಚ್ಚಿಯ ಕಸ್ಟಮ್ಸ್ ಆಯೋಗ ತಿಳಿಸಿದೆ.
ಕಸ್ಟಮ್ಸ್ ಕಮಿಷನರೇಟ್ ಬಿಡುಗಡೆ ಮಾಡಿದ ವರದಿ ಪ್ರಕಾರ, ಸಂಯುಕ್ತ ರೂಪದಲ್ಲಿ ವಶಪಡಿಸಿಕೊಂಡ 1,172 ಗ್ರಾಂ ಹಳದಿ ಲೋಹದಿಂದ 949 ಗ್ರಾಂ ಚಿನ್ನವನ್ನು ಹೊರತೆಗೆಯಲಾಗಿದೆ.