ಹೈದರಾಬಾದ್: ದೇಶದಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊರೊನಾ ವೈರಸ್ನಿಂದಾಗಿ ಈ ಬಾರಿ ವೈಭವೋಪೇರಿತ ಚೌತಿ ಹಬ್ಬದ ಆಚರಣೆ ಇಲ್ಲವಾಗಿದ್ದು, ಸರಳವಾಗಿ ಕೋವಿಡ್-19 ಮಾರ್ಗಸೂಚಿಯಡಿಯಲ್ಲಿ ವಿನಾಯಕನನ್ನು ಪೂಜಿಸಲಾಗುತ್ತಿದೆ.
ವಿಘ್ನನಿವಾರಕನಿಗೆ ಆರತಿ
ಮಹಾರಾಷ್ಟ್ರದ ಮುಂಬೈನಲ್ಲಿ ಪ್ರತಿವರ್ಷವೂ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿಯೂ ಇಲ್ಲಿನ ಸಿದ್ಧಿವಿನಾಯಕ ದೇವಾಲಯದಲ್ಲಿ ಚೌತಿ ಪ್ರಯುಕ್ತ ಗಜಮುಖನಿಗೆ ವಿಶೇಷ ಆರತಿ ಬೆಳಗಲಾಯ್ತು.
ಮತ್ತೊಂದೆಡೆ ನಾಗ್ಪುರದ ತೆಕ್ಡಿಯಲ್ಲಿರುವ ಶ್ರೀ ಗಣೇಶ ಮಂದಿರದಲ್ಲೂ ಗಣನಾಯಕನಿಗೆ ವಿಶೇಷ ಪೂಜೆ ಮಾಡಲಾಯ್ತು. ಪುಣೆಯ ಶ್ರೀಮಂತ್ ದಗ್ದುಶೇತ್ ಹಲ್ವಾಯ್ ಗಣಪತಿ ಮಂದಿರದಲ್ಲೂ ಪ್ರಥಮ ಪೂಜಿತನಿಗೆ ವಿಶೇಷ ಪೂಜೆ ನಡೆಯಿತು.
ರಾಷ್ಟ್ರ ರಾಜಧಾನಿಯಲ್ಲೂ ಏಕದಂತನ ಸ್ಮರಣೆ...
ದೆಹಲಿಯ ದ್ವಾರಕಾದಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಈಶ ಪುತ್ರನಿಗೆ ಚೌತಿ ನಿಮಿತ್ತ ವಿಶೇಷ ಆರತಿ ಬೆಳಗಲಾಗಿದೆ. ನೂರಾರು ಭಕ್ತರು ಗಜಮುಖನನ್ನು ಕಣ್ತುಂಬಿ ಇಷ್ಟಾರ್ಥ ನೆರವೇರಿಕೆಗಾಗಿ ಬೇಡಿಕೊಂಡರು.
ಸೂರತ್ನಲ್ಲಿ ಡ್ರೈ ಫ್ರೂಟ್ ಗಣೇಶ
ಗುಜರಾತ್ನ ಸೂರತ್ ನಗರದ ನಿವಾಸಿಯಾಗಿರುವ ಡಾ. ಅದಿತಿ ಮಿತ್ತಲ್ ಡ್ರೈ ಫ್ರೂಟ್ಗಳಿಂದ ವಿಘ್ನನಿವಾರಕನ ಮೂರ್ತಿ ರಚಿಸಿದ್ದಾರೆ. ಸದ್ಯ ಇದನ್ನು ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿಟ್ಟು ಪೂಜಿಸಲಾಗುತ್ತಿದ್ದು, ಆ ಬಳಿಕ ಈ ಒಣ ಹಣ್ಣುಗಳನ್ನು ಕೋವಿಡ್ ರೋಗಿಗಳಿಗೆ ವಿತರಿಸಾಲಾಗುತ್ತದೆ.
ಇದಲ್ಲದೆ ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಂಗಳಮೂರ್ತಿ ಗಣೇಶನನ್ನು ಪೂಜಿಸಲಾಗುತ್ತಿದೆ. ಕೋವಿಡ್ ನಡುವೆಯೂ ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ.