ಭೋಪಾಲ್(ಮಧ್ಯಪ್ರದೇಶ): ಬಿಜೆಪಿ ನನ್ನನ್ನು ಒಪ್ಪಿಕೊಂಡಿದ್ದೇ ತನ್ನ ಅದೃಷ್ಟವೆಂದಿರುವ ಮಧ್ಯಪ್ರದೇಶದ ಮಾಜಿ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಪಕ್ಷದಲ್ಲಿದ್ದುಕೊಂಡು ಹೃದಯಪೂರ್ವಕವಾಗಿ ಕೆಲಸ ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾರನ್ನು ಇಂದು ಮಧ್ಯಪ್ರದೇಶದ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬರಮಾಡಿಕೊಂಡರು. ಸಿಂಧಿಯಾರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಸಹ ಇಂದು ಘೋಷಿಸಲಾಯಿತು.
ಬಳಿಕ ಮಾತನಾಡಿದ ಸಿಂಧಿಯಾ, ಬಿಜೆಪಿಗೆ ಸೇರ್ಪಡೆಯಾಗಲು ನಾನು ಪುಣ್ಯ ಮಾಡಿದ್ದೇನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನನಗಾಗಿ ಬಿಜೆಪಿಯ ಬಾಗಿಲು ತೆರೆದರು. ನಾನು ಇಲ್ಲಿಗೆ (ಬಿಜೆಪಿ) ನನ್ನ ಜೊತೆ ತಂದಿರುವ ಒಂದೇ ಒಂದು ವಸ್ತು ಎಂದರೆ ಅದು ನನ್ನ ಪರಿಶ್ರಮ ಎಂದು ಹೇಳಿದರು.
ನನ್ನ ಶ್ರಮವನ್ನು ಹಾಕಿ 20 ವರ್ಷಗಳನ್ನು ಕಳೆದಿರುವ ಸಂಸ್ಥೆ ಮತ್ತು ಕುಟುಂಬವನ್ನು (ಕಾಂಗ್ರೆಸ್) ಬಿಟ್ಟು ಇಲ್ಲಿಗೆ ಬಂದಿದ್ದೇನೆ. ಈ ಕುಟುಂಬ (ಬಿಜೆಪಿ) ಬಾಗಿಲು ತೆರೆದು ನನ್ನನ್ನು ಸೇರಿಸಿಕೊಂಡಿದ್ದೇ ನನ್ನ ಪುಣ್ಯ. ಇದು ನನಗೆ ಬಹಳ ಭಾವನಾತ್ಮಕವಾದ ದಿನವಾಗಿದೆ. ರಾಜಕೀಯ ನನ್ನ ಗುರಿಯಲ್ಲ, ಸಮಾಜ ಸೇವೆಯೇ ನನ್ನ ಗುರಿ. 2018ರಲ್ಲಿ ಒಬ್ಬರ ವಿರುದ್ಧ ಒಬ್ಬರು ಹೋರಾಡಿದ್ದ ನಾವು ಈಗ ಒಂದಾಗಿದ್ದೇವೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಕಡೆ ತೋರಿಸಿ ಸಿಂಧಿಯಾ ಮಾತನಾಡಿದರು.