ಲಕ್ನೋ (ಉತ್ತರ ಪ್ರದೇಶ): ಬೆಂಗಳೂರನ ಡಿ.ಜೆ.ಹಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನವೀನ್ ತಲೆ ತಂದವರಿಗೆ 51 ಲಕ್ಷ ರೂ.ಗಳ ಬಹುಮಾನ ಘೋಷಿಸುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಲಖನೌದಲ್ಲಿ ಮಾಜಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಶಹಜೇಬ್ ರಿಜ್ವಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸೋದರಳಿಯ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯುತ ಪೋಸ್ಟ್ ಮಾಡಿದ್ದು, ಪೂರ್ವ ಬೆಂಗಳೂರಿನ ಭಾಗಗಳಾದ ಡಿ.ಜೆ.ಹಳ್ಳಿ ಹಾಗು ಕೆ.ಜಿ.ಹಳ್ಳಿ ಗಲಭೆಗೆ ಕಾರಣವಾಗಿತ್ತು.
ಹೀಗಾಗಿ, ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಆತನ ತಲೆ ತಂದವರಿಗೆ 51 ಲಕ್ಷ ರೂ. ಇನಾಮು ನೀಡುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶಹಜೇಬ್ ರಿಜ್ವಿ ಮಾಡಿದ್ದರು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸುಮೋಟೊದಡಿ ಸ್ಥಳೀಯ ಪೊಲೀಸರು ಶಹಜೇಬ್ ರಿಜ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ.