ನವದೆಹಲಿ: ಕೊರೊನಾ ಸೋಂಕಿನ ನಡುವೆ ಕೃಷಿಗೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸಲು ಆತುರವೇನಿದೆ ಎಂಬುದನ್ನು ಪ್ರಧಾನಿ ವಿವರಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿ ಮಸೂದೆಗಳನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ ನಂತರ ಮಾತನಾಡಿದ ದೇವೇಗೌಡರು, ಕೃಷಿ ಮಸೂದೆಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಯಾವ ರೀತಿಯಲ್ಲಿ ಸಹಕರಿಸುತ್ತವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಇದರ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದು ಹೇಗೆ ಸಾಧ್ಯ ಎಂಬುದನ್ನು ಸರ್ಕಾರ ವಿವರಿಸಬೇಕು ಎಂದರು.