ನವದೆಹಲಿ: ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಬಳಿ ಸಣ್ಣ ಮಕ್ಕಳಿರುವ ಕುಟುಂಬಗಳು ಸೇರಿದಂತೆ ಅನೇಕ ಜನರು ಫುಟ್‌ಪಾತ್ ಮತ್ತು ಸುರಂಗ ಮಾರ್ಗದೊಳಗೆ ವಾಸಿಸುವಂತಾಗಿದೆ.
ಕೊರೊನಾ ವೈರಸ್ ಬಾಧೆಯಿಂದಾಗಿ ದೇಶದಲ್ಲಿ ಸದ್ಯ ಲಾಕ್‌ಡೌನ್ ಜಾರಿಯಲ್ಲಿದೆ. ಇದರ ನಡುವೆ ಇಲ್ಲಿ ವಾಸವಿರುವ ಕೆಲವೊಬ್ಬರ ಸಂಬಂಧಿಕರು ನಗರದ ಕೆಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಮತ್ತೆ ಕೆಲವೊಬ್ಬರು ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲೇ ಲಾಕ್ ಆಗಿದ್ದಾರೆ. ಹೀಗಾಗಿ ಇವರ ಬದುಕು ಬೀದಿಗೆ ಬಂದಿದೆ.
ಹಲವಾರು ಜನರು ಫುಟ್‌ಪಾತ್ ಮತ್ತು ಸುರಂಗ ಮಾರ್ಗದಲ್ಲಿ ಹಲವು ದಿನಗಳಿಂದ ನೆಲೆ ಕಂಡುಕೊಂಡಿರುವುದಕ್ಕೆ ಈಟಿವಿ ಭಾರತ ಪ್ರತ್ಯಕ್ಷ ಸಾಕ್ಷಿ ನೀಡಿದೆ. ಬಡವರಿಗಾಗಿ ದೆಹಲಿ ಸರ್ಕಾರವು ಆಹಾರ, ಕುಡಿಯುವ ನೀರು ಮತ್ತು ಲಾಕ್‌ಡೌನ್ ಸಮಯದಲ್ಲಿ ಉಳಿಯಲು ಸುರಕ್ಷಿತ ಸ್ಥಳ ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿದ್ದರೂ ಇವರಿಗೆ ಯಾವುದೇ ಅನುಕೂಲಗಳು ಸಿಗುತ್ತಿಲ್ಲವಂತೆ.
ದೆಹಲಿ ಸರ್ಕಾರ ಭರವಸೆ ನೀಡಿದಂತೆ ನಿಯಮಿತ ಆಹಾರ ಇವರಿಗೆ ಸಿಗುತ್ತಿಲ್ಲ. ಅಲ್ಲದೆ ಇಲ್ಲಿ ನೆಲೆಯೂರಿದ್ದಕ್ಕೆ ಪೊಲೀಸರು ಗದರಿಸುತ್ತಾರೆ ಎಂದು ದೂರಿದ್ದಾರೆ.
ಸಬ್ ವೇನಲ್ಲಿ ವಾಸಿಸುತ್ತಿರುವ ಉತ್ತರಪ್ರದೇಶದ ಶಹಜಹಾನ್ಪುರದ ವ್ಯಕ್ತಿಯೊಬ್ಬರು ಮಾತನಾಡಿ, ನಾವು ಇಲ್ಲಿಯೇ ವಾಸಿಸುತ್ತಿದ್ದೇವೆ. ಕೆಲವೊಮ್ಮೆ ನಮಗೆ ತಿನ್ನಲು ಏನಾದರೂ ಸಿಗುತ್ತದೆ. ಕೆಲವೊಮ್ಮೆ ಏನೂ ಇಲ್ಲ. ಇದು ತುಂಬಾ ಕಷ್ಟಕರ ಸಮಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.