ನವದೆಹಲಿ: ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿ ಬರುತ್ತಿದ್ದ ವೇಳೆ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ, ಬೇರೊಬ್ಬರ ಪ್ರಾಣ ಕಾಪಾಡಲು ಹೋದ ಮಾಲೀಕ ತನ್ನ ಕುಟುಂಬವನ್ನೇ ಕಳೆದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಫ್ಯಾಮಿಲಿ ಜತೆ ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಅದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಆ ಸ್ಥಳದಲ್ಲಿ ಹೆಚ್ಚಿನ ಜನದಟ್ಟನೆಯಿದ್ದ ಕಾರಣ ಹೊತ್ತಿ ಉರಿಯುತ್ತಿದ್ದ ಕಾರನ್ನ ಬೇರೊಂದು ಸ್ಥಳದಲ್ಲಿ ಪಾರ್ಕ್ ಮಾಡುವ ಸಲುವಾಗಿ ವ್ಯಕ್ತಿಯೊಬ್ಬ ಡ್ರೈವ್ ಮಾಡಿಕೊಂಡು ತೆರಳಿದ್ದಾನೆ. ಈ ಪರಿಣಾಮ ಆತ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನ ಕಳೆದುಕೊಂಡಿದ್ದಾನೆ. ನಿನ್ನೆ ಸಂಜೆ ಸುಮಾರು 6.30ರ ಹೊತ್ತಿಗೆ ಇಂತಹ ದುರ್ಘಟನೆ ನಡೆದಿದೆ.
ಘಟನೆ ನಡೆದಿದ್ದು ಹೇಗೆ?
ಉಪೇಂದ್ರ ಮಿಶ್ರಾ ತನ್ನ ಕುಟುಂಬದೊಂದಿಗೆ ಅಕ್ಷರಧಾಮ ದೇವಾಲಯಕ್ಕೆ ಕಾರಿನಲ್ಲಿ ತೆರಳಿದ್ದರು. ಪತ್ನಿ ರಂಜನಾ ಹಾಗೂ ಅವರ ಮೂವರು ಮಕ್ಕಳು ಅವರ ಜತೆ ಇದ್ದರು. ಈ ಸಂದರ್ಭದಲ್ಲಿ ಅಕ್ಷರಧಾಮ ಫ್ಲೈಓವರ್ ಮೇಲೆ ಬರುತ್ತಿರುವಾಗ ಕಾರಿನಲ್ಲಿ ಗ್ಯಾಸ್ ಲೀಕ್ ಆಗಿದೆ. ಇದರಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಇಡೀ ಕಾರಿಗೆ ಬೆಂಕಿ ಆವರಿಸಿದೆ.
ಇನ್ನು ಉಪೇಂದ್ರ ಕಾರನ್ನ ಬೆಂಕಿ ಹತ್ತಿದ್ದ ಜಾಗದಲ್ಲಿ ಬಿಡದೇ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿದ್ದಾರೆ. ಆ ವೇಳೆ ತಮ್ಮ ಪಕ್ಕದಲ್ಲಿ ಕುಳಿತಿದ್ದ ಮಗಳನ್ನ ತೆಗೆದುಕೊಂಡು ಕೆಳ ಜಿಗಿದಿದ್ದಾರೆ. ನಂತರ ಹಿಂದಿನ ಸೀಟ್ನಲ್ಲಿ ಕುಳಿತಿದ್ದ ಪತ್ನಿ ರಂಜನ್, ಹಾಗೂ ಇಬ್ಬರು ಮಕ್ಕಳಾದ ರಿಧಿ ಹಾಗೂ ನಿಕ್ಕಿಯನ್ನ ಹೊರೆತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಕಾರ್ ಡೋರ್ ಓಪನ್ ಆಗದ ಕಾರಣ ಅವರು ಅಲ್ಲೇ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಡೆಪ್ಯೂಟಿ ಪೊಲೀಸ್ ಕಮಿಷನರ್ ಜಸ್ಮೀತ್ ಸಿಂಗ್, ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.