ತೆಲಂಗಾಣ: ಇಲ್ಲಿನ ಮೆಡ್ಚಲ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಎರಡು ರೈಲ್ವೆ ಬೋಗಿಗಳಿಗೆ ಇಂದು ಬೆಂಕಿ ಕಾಣಿಸಿಕೊಂಡಿದ್ದು, ಎರಡು ಬೋಗಿಗಳು ದಿಡೀರ್ ಆಗಿ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ರೈಲ್ವೆ ಪ್ಲಾಟ್ ಫಾರ್ಮ್ನಲ್ಲಿ ನಿಲ್ಲಿಸಲಾಗಿದ್ದ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಎಲ್ಲೆಡೆ ಹಬ್ಬಿದ್ದು, ದಗದಗನೇ ಹೊತ್ತಿ ಉರಿದಿವೆ. ತಕ್ಷಣವೇ ರೈಲ್ವೆ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸೀಮಿತ ರೈಲು ಸೇವೆಗಳಿಂದಾಗಿ ಈ ಬೋಗಿಗಳು ಅನೇಕ ವರ್ಷಗಳಿಂದ ಅನುಪಯುಕ್ತವಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಸಿಪಿಆರ್ಒ ರಾಕೇಶ್ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ್ದು, ನಿಲ್ದಾಣದಲ್ಲಿ ನಿಲ್ಲಿಸಿದ್ದ 10 ಬೋಗಿಗಳ ಪೈಕಿ ಎರಡಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಯಾವುದೇ ರೀತಿಯ ಅಪಘಾತ ಸಂಭವಿಸಿಲ್ಲ ಎಂದಿದ್ದಾರೆ. ಇದರ ಹಿಂದೆ ಯಾವುದಾದರೂ ದುಷ್ಕರ್ಮಿಗಳ ಕೈವಾಡವಿದೆಯಾ ಅಥವಾ ವಿದ್ಯುತ್ ಅವಘಡದಿಂದ ಈ ಘಟನೆ ಸಂಭವಿಸಿದೆಯೆ? ಎಂದು ತನಿಖೆ ನಡೆಸಲಾಗುತ್ತಿದೆ.