ನವದೆಹಲಿ: ಕೃಷಿ ಮಸೂದೆ ಜಾರಿ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರೆಯಲಿದ್ದು, ಇದೇ ವಿಚಾರವಾಗಿ ಇಂದು ಕೇಂದ್ರ ಹಾಗೂ ರೈತ ಸಂಘಟನೆಗಳ ಮಧ್ಯೆ ನಡೆದ ಮಾತುಕತೆ ಯಾವುದೇ ಒಮ್ಮತವಿಲ್ಲದೆ ಮುಕ್ತಾಯಗೊಂಡಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಕೃಷಿ ಸಚಿವರು ಹಾಗೂ 41 ವಿವಿಧ ರೈತ ಸಂಘಟನೆಗಳ ಮಧ್ಯೆ ಚರ್ಚೆ ನಡೆಯಿತು. ಮಧ್ಯಾಹ್ನ ಆಗುತ್ತಿದ್ದಂತೆ ಊಟದ ವಿರಾಮ ಪಡೆದುಕೊಳ್ಳಲಾಯಿತು. ಈ ವೇಳೆ ಕೇಂದ್ರ ಸಚಿವರು ಕೃಷಿ ಮುಖಂಡರಿಗೆ ನೀಡಿದ್ದ ಊಟದ ಆಹ್ವಾನವನ್ನು ಅವರು ತಿರಸ್ಕರಿಸಿರುವ ಘಟನೆ ನಡೆಯಿತು.
ಓದಿ: ಮೂಡದ ಒಮ್ಮತ: ಯಾವುದೇ ನಿರ್ಧಾರವಿಲ್ಲದೆ ರೈತರು-ಕೇಂದ್ರದ ನಡುವಿನ ಸಭೆ ಮುಕ್ತಾಯ
ಊಟದ ವಿರಾಮದ ಸಮಯದಲ್ಲಿ ಸಭೆಯಲ್ಲಿ ಭಾಗಿಯಾಗಿದ್ದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಪಿಯೂಷ್ ಗೋಯೆಲ್, ರೈತ ಮುಖಂಡರನ್ನ ಊಟಕ್ಕೆ ಆಹ್ವಾನಿಸಿದರು. ಇದನ್ನ ತಿರಸ್ಕರಿಸಿರುವ ರೈತ ಮುಖಂಡರು ನೀವು ನಿಮ್ಮ ಊಟ ಮಾಡಿ, ನಾವು ತಂದಿರುವ ಊಟ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರತಿಭಟನೆಯಲ್ಲಿ ನಿರತರಾಗಿ ಮೃತಪಟ್ಟ ರೈತರಿಗೆ ಎರಡು ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು. ಕಳೆದ ಅನೇಕ ದಿನಗಳಿಂದ ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ ನಡೆದ ಸಭೆಗಳಲ್ಲಿ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ.