ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮೈ ಕೊರೆಯುವ ಚಳಿಯ ಮಧ್ಯೆಯೇ ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿರುವ ರೈತರ ಆಂದೋಲನ 33ನೇ ದಿನಕ್ಕೆ ಕಾಲಿಟ್ಟಿದೆ.
ಕೇಂದ್ರ ಮತ್ತು ಪ್ರತಿಭಟನಾನಿರತ ರೈತ ಮುಖಂಡರ ನಡುವೆ ಐದು ಸುತ್ತಿನ ಮಾತುಕತೆ ನಡೆದ ಬಳಿಕವೂ ಬಿಕ್ಕಟ್ಟು ಶಮನಗೊಂಡಿಲ್ಲ. ದೆಹಲಿಯ ಗಡಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ರೈತರು ತಮ್ಮ ಧರಣಿ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕುಂಭಮೇಳ 2021: ಮೂರು ತಿಂಗಳು ಬದಲಿಗೆ 48 ದಿನಗಳಿಗೆ ಸೀಮಿತ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎರಡನೇ ಬಾರಿಗೆ ಸಿಂಘು ಗಡಿಗೆ ಭೇಟಿ ನೀಡಿ, ರೈತರ ಪ್ರತಿಭಟನೆಗೆ ಬೆಂಬಲಿಸಿದ್ದು, ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರಕ್ಕೆ ಮನವಿ ಮಾಡಿದರು.
ಮನ್ ಕಿ ಬಾತ್ ವೇಳೆ ‘ಥಾಲಿ ಬಜಾವೊ’ ಪ್ರತಿಭಟನೆ : ನಿನ್ನೆ ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತರು ಪಾತ್ರೆಗಳನ್ನು ಬಡಿಯುವ ಮೂಲಕ ಪ್ರತಿಭಟನೆ ನಡೆಸಿ, ಕೃಷಿ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿದರು.