ಹಿಂಗೋಲಿ (ಮಹಾರಾಷ್ಟ್ರ): ಲಾಕ್ಡೌನ್ನಿಂದಾಗಿ ಸಮಾಜದ ಬಹುತೇಕ ಎಲ್ಲ ವರ್ಗಗಳೂ ತೊಂದರೆಗೊಳಗಾಗಿವೆ. ಸಣ್ಣ ರೈತನಿಂದ ಹಿಡಿದು ಕೋಟ್ಯಧೀಶರವರೆಗೆ ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಲ್ಲೂ ಮಹಾರಾಷ್ಟ್ರದ ಕಲ್ಲಂಗಡಿ ಬೆಳೆಗಾರರ ಪಾಡು ಹೇಳತೀರದಂತಾಗಿದೆ.
ಲಾಕ್‌ಡೌನ್, ರೈತ ಬೆಳೆದ ಬೆಳೆಯು ಗ್ರಾಹಕರಿಗೆ ತಲುಪಬೇಕಾದ ಬೆಳೆಗಳ ಸಾಗಣೆ ಸರಪಳಿಯನ್ನು ಮುರಿದಿದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಹಿಂಗೋಲಿ ಜಿಲ್ಲೆಯ ಕಲ್ಲಂಗಡಿ ರೈತ ಕೂಡ ತೊಂದರೆ ಅನುಭವಿಸಿದ್ದಾನೆ. ಇಲ್ಲಿನ ಸ್ಥಳೀಯ ರೈತರ ಪ್ರಕಾರ, ಕಲ್ಲಂಗಡಿ ಕೃಷಿ ಪ್ರಕ್ರಿಯೆಯ ಖರ್ಚಿನಂತೆ ಪ್ರತಿ ಕಲ್ಲಂಗಡಿ ಹಣ್ಣಿಗೆ ಕನಿಷ್ಠ 10-12 ರೂ.ಗಳಾದರೂ ಬರಬೇಕು. ಈ ಕೃಷಿಗೆ ರೈತ 70,000 ರಿಂದ 80,000 ರೂ. ಖರ್ಚು ಮಾಡುತ್ತಾನೆ. ಆದ್ರೆ ದುರದೃಷ್ಟವಶಾತ್ 1,00,000 ರೂ.ಗೆ ಹಣ್ಣುಗಳನ್ನು ಮಾರಾಟ ಮಾಡುವ ಕನಸು ಕಂಡಿದ್ದ ರೈತನೀಗ ಗ್ರಾಹಕರ ಒತ್ತಾಯದಿಂದಾಗಿ ಕೇವಲ 1 ರೂ.ಗೆ ಮಾರಾಟ ಮಾಡುವಂತಾಗಿದೆ.
"ನಾನು 1,200 ಕಲ್ಲಂಗಡಿಗಳನ್ನು ತಲಾ ಒಂದು ರೂಪಾಯಿಗೆ ಮಾರಾಟ ಮಾಡಬೇಕಾಗಿದೆ. ಏನೂ ಇಲ್ಲ ಅನ್ನೋದಕ್ಕಿಂತ ಸ್ವಲ್ಪವಾದ್ರೂ ಕೈಗೆ ಸಿಗುತ್ತಿದೆ ಅನ್ನೋದೆ ಉತ್ತಮ ಅಲ್ವೆ. ಅಲ್ಲದೇ, ಸಣ್ಣ ಸಣ್ಣ ಕಲ್ಲಂಗಡಿಗಳನ್ನು ನಾನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಿದ್ದೇನೆ" ಎಂದು ಇಲ್ಲಿನ ರೈತನೊಬ್ಬ ಅಸಹಾಯಕನಾಗಿ ಹೇಳಿದ್ದಾನೆ.