ಕಾನ್ಪುರ (ಉತ್ತರ ಪ್ರದೇಶ): ಎಂಟು ಮಂದಿ ಪೊಲೀಸರ ಹತ್ಯೆಯ ಪ್ರಮುಖ ಆರೋಪಿ ರೌಡಿಶೀಟರ್ ವಿಕಾಸ್ ದುಬೆ ಮನೆಯನ್ನು ಜಿಲ್ಲಾಡಳಿತ ಈಗಾಗಲೇ ನೆಲಸಮಗೊಳಿಸಿದೆ. ಈತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಪೊಲೀಸರಿಗೆ ಸಾಕಷ್ಟು ಪ್ರಮಾಣದಲ್ಲಿ ಸ್ಫೋಟಕಗಳು ದೊರೆತಿವೆ.
ರೌಡಿ ಶೀಟರ್ ವಿಕಾಸ್ ದುಬೆ ನಿವಾಸದಲ್ಲಿ 25 ಸಜೀವ ಬಾಂಬುಗಳು, 2 ಕೆ.ಜಿ ಸ್ಫೋಟಕ, 6 ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಕಾಸ್ ದುಬೆ ತನ್ನ ಮನೆಯಲ್ಲಿ ಗುಪ್ತ ಬಂಕರ್ ಇಟ್ಟುಕೊಂಡಿರುವ ವಿಚಾರವನ್ನು ಪೊಲೀಸರು ಇದೀಗ ಬಹಿರಂಗಪಡಿಸಿದ್ದಾರೆ. ಈ ಬಂಕರ್‌ನಲ್ಲಿ ಆತ ಮಾರಕಾಸ್ತ್ರಗಳು ಹಾಗು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಎನ್ನುವುದು ಗೊತ್ತಾಗಿದೆ.
ಕಾನ್ಪುರದ ಬಿಕೂ ಗ್ರಾಮದಲ್ಲಿರುವ ಆತನ ಮನೆಯನ್ನು ನೆಲಸಮಗೊಳಿಸುವಾಗ ಅಪಾರ ಪ್ರಮಾಣದ ಸ್ಫೋಟಕಗಳು ಪೊಲೀಸರಿಗೆ ದೊರೆತಿವೆ. ಇದೇ ಪ್ರದೇಶದಲ್ಲಿ ದುಬೆ ಹಾಗು ಆತನ ಸಹಚರರು ಕಟ್ಟಡದ ಮೇಲೆ ನಿಂತು 8 ಮಂದಿ ಪೊಲೀಸರ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದರು. ಆರೋಪಿಯ ಮನೆಯಿರುವ ಬಿಕೂ ಗ್ರಾಮವು ಉತ್ತರ ಪ್ರದೇಶ ರಾಜಧಾನಿ ಲಖನೌದಿಂದ 120 ಕಿಲೋ ಮೀಟರ್ ದೂರದಲ್ಲಿದೆ.
ಸದ್ಯ ರೌಡಿ ಶೀಟರ್‌ನ ಸಹಚರನನ್ನು ಭಾನುವಾರ ಬಂಧಿಸಲಾಗಿದೆ. ವಿಕಾಸ್ ದುಬೆ ಪತ್ತೆ ಹಚ್ಚಲು ಈಗಾಗಲೇ ಉತ್ತರ ಪ್ರದೇಶ ಪೊಲೀಸರು 25 ತಂಡಗಳನ್ನು ರಚಿಸಿದ್ದಾರೆ. ಈ ತಂಡಗಳು ಕಳೆದ 48 ಗಂಟೆಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಸ್ಥಳಗನ್ನು ಜಾಲಾಡಿವೆ. ಈತನನ್ನು ಪತ್ತೆ ಹಚ್ಚಲು ರಾಜ್ಯದ ಪ್ರಮುಖ ಚೆಕ್ ಪೋಸ್ಟ್‌ಗಳು, ಭಾರತ-ನೇಪಾಳ ಗಡಿಪ್ರದೇಶದಲ್ಲಿ ವಾಂಟೆಡ್ ಪೋಸ್ಟರ್‌ಗಳನ್ನು ಹಚ್ಚಲಾಗಿದೆ. ಜೊತೆಗೆ ಈತನ ಸುಳಿವು ನೀಡಿದವರಿಗೆ ನಗದು ಬಹುಮಾನವನ್ನೂ ಯುಪಿ ಪೊಲೀಸರು ಘೋಷಿಸಿದ್ದಾರೆ.