ನವದೆಹಲಿ: ಜೆಇಇ, ನೀಟ್ ಪರೀಕ್ಷೆಗಳನ್ನು ನಡೆಸಲು ವಿಳಂಬ ಮಾಡಿದರೆ ವಿದ್ಯಾರ್ಥಿಗಳಿಗೆ ಒಂದು ವರ್ಷದ ಶೈಕ್ಷಣಿಕ ವರ್ಷ ನಷ್ಟವಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಜೆಇಇ, ನೀಟ್ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವುದಿಲ್ಲ ಎಂದು ಪೋಖ್ರಿಯಾಲ್ ಹೇಳಿದ್ದಾರೆ.
"ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ) ಬಿಡುಗಡೆ ಮಾಡಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು. ಪರ್ಯಾಯ ಆಸನ ಯೋಜನೆ, ಪ್ರತೀ ಕೋಣೆಗೆ ಕಡಿಮೆ ಅಭ್ಯರ್ಥಿಗಳು, ಪ್ರವೇಶ ಮತ್ತು ನಿರ್ಗಮನವನ್ನು ಒಳಗೊಂಡಂತೆ ಎನ್‌ಟಿಎ ಹಲವಾರು ಕ್ರಮಗಳೊಂದಿಗೆ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಯೋಜಿಸಿದೆ" ಎಂದು ಸಚಿವರು ಹೇಳಿದರು.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸುವ ಸುಪ್ರೀಂಕೋರ್ಟ್‌ನ ತೀರ್ಪನ್ನು ಬೆಂಬಲಿಸಿದ ಪೋಖ್ರಿಯಾಲ್, "ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಈ ವರ್ಷ ಎರಡು ಬಾರಿ ಮುಂದೂಡಲಾಗಿದೆ. ಆದರೆ ಈಗ ಪರೀಕ್ಷೆಗಳನ್ನು ತಡೆ ಹಿಡಿಯಬಾರದು ಎಂದು ಶಿಕ್ಷಕರು, ಪೋಷಕರು, ಸುಪ್ರೀಂಕೋರ್ಟ್ ಮತ್ತು ಸರ್ಕಾರ ಬಯಸಿದೆ. ಸೋಷಿಯಲ್ ಮೀಡಿಯಾ ಮತ್ತು ಇಮೇಲ್‌ಗಳಲ್ಲಿ ನಾನು ಅನೇಕ ವಿನಂತಿಗಳನ್ನು ಸ್ವೀಕರಿಸಿದ್ದೇನೆ. ಅದರಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯನ್ನು ನಡೆಸಬೇಕೆಂದು ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂದರು.
ಸುಮಾರು 25 ಲಕ್ಷ ಅಭ್ಯರ್ಥಿಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವುದನ್ನು ರಮೇಶ್ ಪೋಖ್ರಿಯಾಲ್ ಗಮನಿಸಿದ್ದಾರೆ.
ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ) ಸೆಪ್ಟೆಂಬರ್ 1-6ರವರೆಗೆ ನಿಗದಿಯಾಗಿದ್ದರೆ, ಸೆಪ್ಟೆಂಬರ್ 13ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್-ಯುಜಿ ) ನಡೆಸಲು ಯೋಜಿಸಲಾಗಿದೆ.