ನವದೆಹಲಿ: ಡಿಜಿಟಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ಒಂದು ವರ್ಷದೊಳಗೆ ರಾಮೋಜಿ ಗ್ರೂಪ್ ಅಧ್ಯಕ್ಷ ರಾಮೋಜಿ ರಾವ್ ಅವರು ರೂಪಿಸಿರುವ 'ಈಟಿವಿ ಭಾರತ್'ಗೆ 2019ರ ದಕ್ಷಿಣ ಏಷ್ಯಾದ ಡಿಜಿಟಲ್ ಮೀಡಿಯಾ ಪ್ರಶಸ್ತಿಯಲ್ಲಿ 'ಬೆಸ್ಟ್ ಡಿಜಿಟಲ್ ನ್ಯೂಸ್ ಸ್ಟಾರ್ಟ್-ಅಪ್' ಪ್ರಶಸ್ತಿ ಒಲಿದು ಬಂದಿದೆ.
ಎರಡು ದಿನಗಳ ಕಾಲ ನಡೆಯಲಿರುವ ಡಿಜಿಟಲ್ ಮೀಡಿಯಾ ಇಂಡಿಯಾ (ಡಿಎಂಐ) ಸಮ್ಮೇಳನದ 9ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈಟಿವಿ ಭಾರತ್ ನಿರ್ದೇಶಕಿ ಬೃಹತಿ ಚೆರುಕುರಿ ಈ ಪ್ರಶಸ್ತಿ ಸ್ವೀಕರಿಸಿದರು.
ವರ್ಲ್ಡ್ ಅಸೋಸಿಯೇಶನ್ ಆಫ್ ನ್ಯೂಸ್ ಪೇಪರ್ ಅಂಡ್ ಪಬ್ಲಿಷರ್ಸ್ (ವಾನ್-ಇಫ್ರಾ) ಸಂಸ್ಥೆಯು ಈ ಪ್ರಶಸ್ತಿ ನೀಡಿದೆ. ಅತ್ಯುತ್ತಮ ಡಿಜಿಟಲ್ ನ್ಯೂಸ್ ಸ್ಟಾರ್ಟ್ ಅಪ್ ವಿಭಾಗದಲ್ಲಿ 'ದಿ ವೈರ್ ಇಂಗ್ಲಿಷ್' ಚಿನ್ನ, 'ದಿ ಫೆಡರಲ್' ಬೆಳ್ಳಿ ಗೆದ್ದಿದೆ. ಅದೇ ವಿಭಾಗದಲ್ಲಿ ಈಟಿವಿ ಭಾರತ್‌ಗೆ ಕಂಚು ನೀಡಿ ಗೌರವಿಸಲಾಗಿದೆ.
ವಾನ್-ಇಫ್ರಾ 120 ದೇಶಗಳಲ್ಲಿ 3,000ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಮತ್ತು 18,000 ಪ್ರಕಟಣೆಗಳನ್ನ ಪ್ರತಿನಿಧಿಸುವ ಜಾಗತಿಕ ಮಾಧ್ಯಮ ಸಂಸ್ಥೆಯಾಗಿದೆ. ಡಿಜಿಟಲ್ ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್‌ಗಳ ಪ್ರೇಕ್ಷಕರಿಗೆ ಇದ್ದಲ್ಲಿಯೇ ಸುದ್ದಿ ಸಿಗುವ ಹಾಗೆ ಮಾಡಲು ಪರಿಹಾರ ನೀಡುವ ಮಾಧ್ಯಮಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಇದಕ್ಕೂ ಮೊದಲು 2019ರ ಸೆಪ್ಟೆಂಬರ್ 13ರಂದು 'ಈಟಿವಿ ಭಾರತ' ಐಬಿಸಿ ಇನ್ನೋವೇಷನ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು. ಈಟಿವಿ ಭಾರತ ದೇಶದ ಪ್ರಮುಖ 13 ಭಾಷೆಗಳಲ್ಲಿ ಸುದ್ದಿಯನ್ನು ದಿನದ 24 ಗಂಟೆ ನೀಡುತ್ತದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಉರ್ದು, ಮಲಯಾಳಂ, ಗುಜರಾತಿ, ಮರಾಠಿ, ಬೆಂಗಾಲಿ, ಓಡಿಯಾ, ಅಸ್ಸಾಮಿ, ಪಂಜಾಬಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈಟಿವಿ ಭಾರತದ ಸುದ್ದಿಗಳು ಪ್ರಕಟವಾಗುತ್ತವೆ.
ಗ್ರಾಮೀಣ ಭಾಗದಿಂದ ಹಿಡಿದು ಅಂತಾರಾಷ್ಟ್ರೀಯ ಸುದ್ದಿಗಳನ್ನು ಮೊಬೈಲ್ ಆ್ಯಪ್ ಮೂಲಕ ಈಟಿವಿ ಭಾರತ ನೀಡುತ್ತಿದ್ದು, 2019ರ ಮಾರ್ಚ್ 21ರಂದು ಲಾಂಚ್ ಆಗಿದ್ದ ಈಟಿವಿ ಭಾರತ ಮೊಬೈಲ್ ಆ್ಯಪ್ ವಸ್ತುನಿಷ್ಠತೆ ಹಾಗೂ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಸುದ್ದಿಯ ಜೊತೆಗೆ ನ್ಯೂಸ್ ಬುಲೆಟಿನ್ ನೀಡುವ ದೇಶದ ಮೊದಲ ಪ್ರಯತ್ನವನ್ನು ಈಟಿವಿ ಭಾರತ ಮಾಡಿದೆ.