ನವದೆಹಲಿ: ಬೇಹುಗಾರಿಕೆ ಆರೋಪ ಪ್ರಕರಣದಲ್ಲಿ ಫ್ರೀಲಾನ್ಸ್ ಪತ್ರಕರ್ತ ರಾಜೀವ್ ಶರ್ಮಾ, ಚೀನಾದ ಮಹಿಳೆ ಮತ್ತು ನೇಪಾಳ ನಾಗರಿಕ ಶೇರ್ ಸಿಂಗ್ ಅವರನ್ನು ನ್ಯಾಯಾಂಗ ವಶಕ್ಕೆ ನೀಡಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪಟಿಯಾಲ ಹೌಸ್ ಕೋರ್ಟ್‌ನ ಮುಖ್ಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟರ್ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಗಳ ಪರ ವಕೀಲ ಅದೀಶ್ ಅಗರ್‌ವಾಲ್ ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ದೆಹಲಿಯ ಪೊಲೀಸ್ ಇಲಾಖೆಯ ವಿಶೇಷ ಪಡೆ 61 ವರ್ಷದ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿಸಿತ್ತು. ಶರ್ಮಾ ವಿರುದ್ಧ ಚೀನಾ ಗುಪ್ತಚರ ಇಲಾಖೆ ಪರ ಕೆಲಸ ಮಾಡಿದ ಆರೋಪವಿದೆ.
ಪಿತಾಮ್‌ಪುರ ಪ್ರದೇಶದಲ್ಲಿರುವ ಬಂಧಿತ ಶರ್ಮಾ ಮನೆಯಲ್ಲಿ ಶೋಧ ನಡೆಸಿದ್ದ ವೇಳೆ ಲ್ಯಾಪ್‌ಟಾಪ್, ಭಾರತೀಯ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲ ರಹಸ್ಯ ಮಾಹಿತಿ ಮತ್ತು ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.
ಚೀನಾದ ಮಹಿಳೆ ಕ್ವಿಂಗ್ ಶಿ ಮತ್ತು ಆಕೆಯ ನೇಪಾಳದ ಪತಿ ಶೇರ್ ಸಿಂಗ್ ಅಲಿಯಾಸ್ ರಾಜ್ ಬೊಹ್ರಾರನ್ನು ಶರ್ಮಾಗೆ ಹಣ ವರ್ಗಾವಣೆ ಮಾಡಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಚೀನಾದ ಗುಪ್ತಚರ ಇಲಾಖೆಗೆ ಭಾರತದ ಮಾಹಿತಿಯನ್ನು ನೀಡುವಂತೆ ಬಂಧಿತರು ಒಲೈಕೆ ಮಾಡಿದ್ದರು ಎಂದು ವಿಶೇಷ ಪಡೆಯ ಡಿಸಿಪಿ ಸಂಜೀವ್ ಯಾದವ್ ತಿಳಿಸಿದ್ದರು.