ಖಾರ್ಗೋನ್ (ಮಧ್ಯ ಪ್ರದೇಶ): ಒಂದೇ ಕುಟುಂಬದ 8 ಜನರಿಗೆ ಕೋವಿಡ್-19 ಸೋಂಕು ತಗುಲಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಇವರಾರೂ ವಿದೇಶ ಪ್ರವಾಸ ಮಾಡಿದ ಹಿನ್ನೆಲೆ ಹೊಂದಿಲ್ಲ. ಆದರೆ ಕೋವಿಡ್-19 ಸೋಂಕಿತ ಸಂಬಂಧಿಯೊಬ್ಬರನ್ನು ಭೇಟಿಯಾಗಿದ್ದರಿಂದ ಇವರೆಲ್ಲರಿಗೂ ಸೋಂಕು ತಗುಲಿದೆ.
ಕೆಲ ವಾರಗಳ ಹಿಂದೆ ದಕ್ಷಿಣ ಆಫ್ರಿಕಾಗೆ ಹೋಗಿ ಬಂದ ಹಾಗೂ ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ಸಂಬಂಧಿಯನ್ನು ಭೇಟಿ ಮಾಡಿದ್ದರಿಂದ ಈಗ ಇವರೆಲ್ಲರೂ ರೋಗದಿಂದ ನರಳುವಂತಾಗಿದೆ. 8 ಜನರನ್ನೂ ಖಾರ್ಗೋನ್ ನಗರದ ಆಸ್ಪತ್ರೆಯೊಂದರಲ್ಲಿ ಕ್ವಾರಂಟೈನ್ನಲ್ಲಿರಿಸಲಾಗಿದೆ. ಸೋಂಕು ತಗುಲಿಸಿದ್ದಾನೆ ಎಂದು ಹೇಳಲಾದ ನೂರ್ ಮೊಹಮ್ಮದ್ ಎಂಬಾತ ಮಾ. 20ರಂದು ಖಾರ್ಗೋನ್ಗೆ ಬಂದಿದ್ದ ಹಾಗೂ ನಂತರ 28ರಂದು ಮೃತಪಟ್ಟಿದ್ದ.
"ಖಾರ್ಗೋನ್ಗೆ ಬಂದ ನಂತರ ನೂರ್ ಮೊಹಮ್ಮದ್ ತನ್ನ ವಿದೇಶ ಪ್ರವಾಸ ಹಾಗೂ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ವಿಷಯವನ್ನು ಜಿಲ್ಲಾಡಳಿತದಿಂದ ಮರೆಮಾಚಿದ್ದನಂತೆ. ಈತನ ತಾಯಿ ಕೂಡ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ವಿದೇಶ ಪ್ರವಾಸ ಮಾಡಿ ಬಂದವರು ಹಾಗೂ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರು ತಕ್ಷಣ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು. ಇದರಿಂದ ಬೇಗನೆ ಪರೀಕ್ಷೆ ಮಾಡಿ ಸೋಂಕು ಹರಡದಂತೆ ತಡೆಗಟ್ಟಲು ಸಹಾಯವಾಗುತ್ತದೆ." ಎಂದು ಜಿಲ್ಲಾ ಕಲೆಕ್ಟರ್ ಗೋಪಾಲ ಚಂದ್ರ ಧಾಡ್ ತಿಳಿಸಿದ್ದಾರೆ.
ಖಾರ್ಗೋನ್ ನಗರದಲ್ಲಿ ಈವರೆಗೆ 12 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.