ಭೋಪಾಲ್ : ಸತತವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಕಮಲ್‌ನಾಥ್ ವಿರುದ್ಧ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅವರ ಹೆಸರನ್ನು ತೆಗೆದು ಹಾಕಿದೆ.
ಈ ತಿಂಗಳ ಆರಂಭದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಬಿಜೆಪಿ ನಾಯಕಿ ಇಮಾರ್ಥಿ ದೇವಿಯನ್ನು ಕಮಲ್‌ನಾಥ್ 'ಐಟಂ' ಎಂದು ಸಂಬೋಧಿಸಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ತನ್ನ ವಿರುದ್ಧ ಕೀಳು ಮಟ್ಟದ ಭಾಷೆ ಬಳಸಿ ಕಮಲ್‌ನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇಮಾರ್ಥಿ ದೇವಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಕಾರಣದಿಂದ ಹಾಗೂ ಇತರ ನೀತಿ ಸಂಹಿತಿ ಉಲ್ಲಂಘನೆ ದೂರುಗಳನ್ನು ಪರಿಗಣಿಸಿದ ಚುನಾವಣಾ ಆಯೋಗ ಕ್ರಮಕೈಗೊಂಡಿದೆ.
ಹೀಗಾಗಿ, ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಕಮಲ್‌ನಾಥ್ ಖರ್ಚುವೆಚ್ಚವನ್ನು ಕ್ಷೇತ್ರಕ್ಕೆ ಸಂಬಂಧಿಸಿದ ಅಭ್ಯರ್ಥಿಯೇ ಭರಿಸಬೇಕಿದೆ. ಇಲ್ಲಿಯವರೆಗೆ ಪಕ್ಷ ವೆಚ್ಚ ಭರಿಸುತ್ತಿತ್ತು.