ಛತ್ತರ್‌ಪುರ (ಮಧ್ಯಪ್ರದೇಶ): ಈ ಕೊರೊನಾ ಯುದ್ಧದಲ್ಲಿ ವೈದ್ಯರು, ಪೌರ ಕಾರ್ಮಿಕರು, ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಇಲ್ಲೊಂದು ಕುಟುಂಬದ ಎಲ್ಲರೂ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಛತ್ತರ್‌ಪುರ ಜಿಲ್ಲೆಯಲ್ಲಿ ಒಂದು ಕುಟುಂಬವಿದ್ದು, ಈ ಪ್ರದೇಶದಲ್ಲಿ ಈ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ. ಕಾರಣ ಕುಟುಂಬದ 5 ಸದಸ್ಯರೂ ಕೂಡ ಪೊಲೀಸ್ ಸೇವೆಯಲ್ಲಿದ್ದಾರೆ. ಅಲ್ಲದೆ, ಈ ಕೊರೊನಾ ಮಹಾಮಾರಿ ವಿರುದ್ಧ ಯೋಧರಾಗಿ ಹೋರಾಟ ಮಾಡುತ್ತಿದ್ದಾರೆ.
ಕುಟುಂಬದ ಮುಖ್ಯಸ್ಥರಾದ ಶ್ಯಾಮ್ ಲಾಲ್ ಅಹಿರ್ವಾರ್ ಅವರು ಸೇರಿದಂತೆ ಮೂವರು ಮಕ್ಕಳಾದ, ಧರ್ಮೇಂದ್ರ ಅಹಿರ್ವಾರ್, ವೀರೇಂದ್ರ ಅಹಿರ್ವಾರ್, ಮಹೇಂದ್ರ ಅಹಿರ್ವಾರ್ ಮತ್ತು ಸೊಸೆ ಉಮಾ ದೇವಿ ಅವರು ಪೊಲೀಸ್ ಕೆಲಸದಲ್ಲಿದ್ದು, ಈ ಕೊರೊನಾ ಮಹಾಮಾರಿ ನಡುವೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಅಹಿರ್ವಾರ್, ನಮ್ಮ ತಂದೆ ಛತ್ತರ್‌ಪುರ ನಿಯಂತ್ರಣ ಕೊಠಡಿಯ ಇನ್‌ಚಾರ್ಜ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂವರು ಸಹೋದರರು ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಲು ಅನೇಕ ಬಾರಿ ಅವಕಾಶ ಸಿಕ್ಕಿತ್ತು. ನನ್ನ ತಂದೆ ಮತ್ತು ನನ್ನ ಇಬ್ಬರು ಸಹೋದರರು ಒಟ್ಟಾಗಿ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಮತ್ತು ನಿಷ್ಟೆಯಿಂದ ನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ.
ಕೆಲವೊಮ್ಮೆ ಒಬ್ಬರನ್ನೊಬ್ಬರು ಭೇಟಿಯಾಗುವುದು ಕಷ್ಟವಾಗುತ್ತದೆ. ಆದರೆ, ಕುಟುಂಬದ ಪ್ರತಿಯೊಬ್ಬರಿಗೂ ಒಂದೇ ಗುರಿ ಇದೆ. ಮೊದಲು ಕರ್ತವ್ಯ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಹೆಚ್ಚಿನ ಪ್ರಯತ್ನದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಧರ್ಮೇಂದ್ರ ತಮ್ಮ ಸೇವೆಯ ಬಗ್ಗೆ ಹೆಮ್ಮೆಪಟ್ಟರು.