ಆಧುನಿಕ ಯುದ್ಧಕ್ಕೆ ಈ ಘಟನೆ ಒಂದು ಮಾದರಿ ಎನಿಸಿದೆ. ಹೀಗೆ ಪ್ರಾರಂಭವಾದ ತಾಂತ್ರಿಕವಾಗಿ ಉತ್ತಮವಾದ, ವೇಗವಾದ, ರಹಸ್ಯವಾದ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುವ ಸ್ಪರ್ಧೆಯು ಈಗ ಅಮೆರಿಕದ 5ನೇ ತಲೆಮಾರಿನ ಎಫ್- 22, ಎಫ್ - 35 ಮತ್ತು ರಷ್ಯಾದ ಸುಖೋಯ್- 57ರಂತಹ ಆಕಾಶ ಆಳುವ ಅತ್ಯುತ್ತಮ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಯಂತ್ರಗಳ ಸೃಷ್ಟಿಗೆ ಕಾರಣವಾಗಿದೆ. ಈ ರಾಷ್ಟ್ರಗಳೆಲ್ಲವೂ ಈಗ 6ನೇ ತಲೆಮಾರಿನ ಯುದ್ಧ ವಿಮಾನಗಳ ನಿರ್ಮಾಣದ ಸಿದ್ಧತೆಯಲ್ಲಿದ್ದು, ಅದರ ಮಾನದಂಡಗಳು ಇನ್ನೂ ಅಭಿವೃದ್ಧಿಯ ಹಂತದಲ್ಲಿವೆ.
ಹೀಗಿರುವಾಗ ಯುದ್ಧಭೂಮಿಯಲ್ಲಿ ವಾಯುಶಕ್ತಿಯನ್ನು ಬಳಸುತ್ತಿರುವ ಈ ಮಧ್ಯೆ, ಜಗತ್ತು ಮತ್ತೊಂದು ಮಾದರಿಯ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಆರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವೆ ನಾಗೋರ್ನೊ - ಕರಾಬಖ್ ಪ್ರದೇಶದ ಮೇಲೆ ನಡೆದ ಯುದ್ಧದಲ್ಲಿ, ಆರ್ಮೇನಿಯಾದ ಪ್ರಮುಖ ರಕ್ಷಣಾ ಘಟಕಗಳನ್ನು ಡ್ರೋನ್ ದಾಳಿಯೊಂದಿಗೆ ಯಾವ ಪರಿ ನಾಶ ಮಾಡಲಾಯಿತೆಂದರೆ, ಆರ್ಮೇನಿಯಾ ತಕ್ಷಣ ಯುದ್ಧವನ್ನು ನಿಲ್ಲಿಸಬೇಕಾಯಿತು ಹಾಗೂ ಅದರ ಪರವಾಗಿ ರಷ್ಯಾ ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಬೇಕಾಯಿತು.
ಇಸ್ರೇಲ್ ಮತ್ತು ಟರ್ಕಿಯ ಡ್ರೋನ್‌ಗಳು ಆರ್ಮೇನಿಯಾದ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಶ್ಯಸ್ತ್ರಗೊಳಿಸುವ ತಂತ್ರವನ್ನು ಮಾಡಿದ್ದವು. ಯುದ್ಧಭೂಮಿಯಲ್ಲಿ ಗುರಿಯನ್ನು ಹೊಡೆದುರುಳಿಸಲು ಮಾನವಸಹಿತ ವಿಮಾನದ ಅಗತ್ಯವನ್ನು ಡ್ರೋನ್‌ಗಳು ಇಲ್ಲವಾಗಿಸಿರುವುದರಿಂದ, ಆಕಾಶದಲ್ಲಿ ಶಕ್ತಿಯ ಸಮತೋಲನದ ಲೆಕ್ಕಾಚಾರವೇ ಈಗ ತಲೆಕೆಳಗಾಗಿದೆ. ತಮ್ಮ ಶತ್ರುಗಳನ್ನು ಆಕಾಶದಿಂದಲೇ ಹೊಡೆಯುವ ಅವಕಾಶವನ್ನು ಸೈನಿಕವಾಗಿ ಕೆಳಮಟ್ಟದಲ್ಲಿರುವ ದೇಶಗಳಿಗೆ ಈ ಅಗ್ಗದ ಶಸ್ತ್ರಸಜ್ಜಿತ ಡ್ರೋನ್‌ಗಳು ನೀಡುತ್ತವೆ. ಅಸಮ ಬಲದ ಯುದ್ಧದ ಪಾಠಗಳಲ್ಲಿ ಸೇರಿಸಬೇಕಾದ ಮತ್ತೊಂದು ತಂತ್ರ ಎನಿಸಿದೆ ಈ ಮಾದರಿ.
ಯುದ್ಧ ವಿಮಾನಗಳ ಸಂಖ್ಯೆ ಇಳಿಕೆಯಿಂದ ಬಳಲುತ್ತಿರುವ ತನ್ನ ವಾಯುಪಡೆಗೆ 83 ಎಲ್‌ಸಿಎ (ಲೈಟ್ ಕಂಬ್ಯಾಟ್ ಏರ್‌ಕ್ರ್ಯಾಫ್ಟ್ ಹಗುರ ಯುದ್ಧ ವಿಮಾನ) ತೇಜಸ್ ವಿಮಾನಗಳನ್ನು ಖರೀದಿಸಲು ಭಾರತ ಈಗ ಒಪ್ಪಿಗೆ ನೀಡಿದೆ. ಎಲ್‌ಒಸಿ (ಲೈನ್ ಆಫ್ ಕಂಟ್ರೋಲ್ ಗಡಿ ನಿಯಂತ್ರಣ ರೇಖೆ) ಮತ್ತು ಎಲ್‌ಎಸಿಯಲ್ಲಿ (ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ ವಾಸ್ತವಿಕ ಗಡಿ ನಿಯಂತ್ರಣ ರೇಖೆ) ತನ್ನ ಶತ್ರುಗಳು ನೆಲೆಗೊಂಡಿರುವುದರಿಂದ, ಭಾರತವು ತನ್ನ ವಾಯುಪಡೆಯಲ್ಲಿ ವಿದೇಶಿ ಮತ್ತು ಸ್ಥಳೀಯ ವಿಮಾನಗಳನ್ನು ಹೊಂದಲಷ್ಟೇ ಅಲ್ಲ, ಸಶಸ್ತ್ರ ಡ್ರೋನ್‌ಗಳ ತಂಡ ಕಟ್ಟಿಕೊಳ್ಳಲೂ ಸಹ ಅದು ಈಗ ಹೆಚ್ಚು ಹೂಡಿಕೆ ಮಾಡಬೇಕಿದೆ.
ಮಾನವರಹಿತ ವೈಮಾನಿಕ ವಾಹನ (ಯುಎವಿ ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ರಕ್ಷಣಾ ಸಂಸ್ಥೆಗೆ ಹೆಚ್ಚಿನ ಆದ್ಯತೆಯಾಗಕಿದೆ. ಏಕೆಂದರೆ ಇದು ದೇಶಕ್ಕೆ ಎರಡನೇ ಸಶಸ್ತ್ರ ವಾಯು ಘಟಕ ಹೊಂದುವ ಆಯ್ಕೆಯನ್ನು ನೀಡುತ್ತದೆ. ಚೀನಾ ಈಗಾಗಲೇ ಉತ್ತಮವಾಗಿ ಅಭಿವೃದ್ಧಿಪಡಿಸಿದ ಹಾಗೂ ಸಂಯೋಜಿತ ಡ್ರೋನ್ ಬಲವನ್ನು ಹೊಂದಿದ್ದರೆ, ಡ್ರೋನ್ ತಂತ್ರಜ್ಞಾನದಲ್ಲಿ ಪಾಕಿಸ್ತಾನವು ಟರ್ಕಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಆದರೆ, ಭಾರತದ ಡಿಆರ್‌ಡಿಒ (ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಜೇಶನ್ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ಚಾಲಿತ ರುಸ್ತುಮ್ 1 ಮತ್ತು 2, ಮತ್ತು ಘಾತಕ್ ಡ್ರೋನ್‌ಗಳು, ಯುದ್ಧಭೂಮಿಯಲ್ಲಿ ಪರೀಕ್ಷಿಸಬಹುದಾದ ಅಪೇಕ್ಷಿತ ಹಂತವನ್ನು ಇನ್ನೂ ತಲುಪಿಲ್ಲ.
ಆದಾಗ್ಯೂ ಸ್ವಲ್ಪ ತಡವಾಗಿಯಾದರೂ, ಭಾರತೀಯ ಸೇನೆಯ ಸಮೂಹ ಡ್ರೋನ್ ಸಾಮರ್ಥ್ಯದ ಇತ್ತೀಚಿನ ಪ್ರದರ್ಶನವು ಯುದ್ಧಭೂಮಿಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ದೇಶವು ಗಮನ ಹರಿಸಿದೆ ಎಂಬದನ್ನು ಸೂಚಿಸಿದೆ.
ಒಂದು ವೇಳೆ ಡ್ರೋನ್‌ಗಳು ಖಡ್ಗವಾಗಿದ್ದರೆ, ಇವುಗಳ ವಿರುದ್ಧ ರಕ್ಷಣೆ ಪಡೆಯುವಂತಹ ಗುರಾಣಿ ಡ್ರೋನ್‌ಗಳನ್ನು ಸಿದ್ಧಪಡಿಸುವುದು ಮುಂದಿನ ಮುಖ್ಯ ಸಂಗತಿಯಾಗಿದೆ. ಸಶಸ್ತ್ರ ಡ್ರೋನ್‌ಗಳ ವಿರುದ್ಧದ ರಕ್ಷಣೆ ಇನ್ನೂ ಸಾಂಪ್ರದಾಯಿಕ ಕ್ಷೇತ್ರದಲ್ಲಿದ್ದು, ಅವುಗಳನ್ನು ಎದುರಿಸಲು ಸದ್ಯ ವಿಮಾನ ವಿರೋಧಿ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದೆ. ಇದು ಭಾರತ ಅನುಸರಿಸಬೇಕಾದ ಆಯ್ಕೆಯಲ್ಲ. ತೀವ್ರ ಸಂದರ್ಭ ಉಂಟಾದಾಗ ಮಾತ್ರ ಅದನ್ನು ಎದುರಿಸಲು ವಿಮಾನ ವಿರೋಧಿ ಕ್ರಮಗಳು ರಕ್ಷಣೆಯ ತಾತ್ಕಾಲಿಕ ಕ್ರಮವಾಗಬಹುದು.
ಭಾರತವು ಮಾನವರಹಿತ ವಿಮಾನ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಜೊತೆಗೆ ಡ್ರೋನ್‌ಗಳ ವಿರುದ್ಧದ ತನ್ನ ರಕ್ಷಣಾ ತಂತ್ರಜ್ಞಾನವನ್ನು ಸಹ ಏಕಕಾಲದಲ್ಲಿ ಅಭಿವೃದ್ಧಿಪಡಿಸಬೇಕು. ಇದಕ್ಕೆ ರಾಡಾರ್‌ಗಳ ಪ್ರಬಲ ವ್ಯವಸ್ಥೆ ಮತ್ತು ಮೈಕ್ರೊವೇವ್ ಬಳಸುವ ಶಸ್ತ್ರಾಸ್ತ್ರಗಳ ಅಗತ್ಯವಿರುತ್ತದೆ. ಅಂತಿಮವಾಗಿ, ಡ್ರೋನ್‌ಗಳನ್ನು ನಿಯಂತ್ರಿಸಲು ನಮಗೆ ಬೇಕಿರುವುದು ಸುಧಾರಿತ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳು ಹಾಗೂ ಇವನ್ನು ನಾವೇ ಸಿದ್ಧಪಡಿಸಿಕೊಳ್ಳಬಹುದು. ಅನೇಕ ದೇಶಗಳು ಇಂತಹ ತಂತ್ರಜ್ಞಾನಗಳನ್ನು ಹೊಂದಿದ್ದು, ಅವು ಸ್ವಯಂ ನಿರ್ದೇಶಿತ ಕ್ಷಿಪಣಿಗಳ ವಿರುದ್ಧ ಸಂಭವನೀಯ ರಕ್ಷಣೆಯಾಗುತ್ತವೆ ಎಂಬುದನ್ನು ತೋರಿಸಿಕೊಟ್ಟಿವೆ.
ಭಾರತದ ರಕ್ಷಣಾ ಸವಾಲುಗಳು ದೊಡ್ಡದಾಗಿವೆ. ಅವುಗಳನ್ನು ಎದುರಿಸುವ ಏಕೈಕ ಮಾರ್ಗವೆಂದರೆ ನಮ್ಮ ಸೈನಿಕ-ಕೈಗಾರಿಕಾ ಸಂಕೀರ್ಣವು ಹಿಂದಿನ ಶಸ್ತ್ರಾಸ್ತ್ರಗಳನ್ನು ಕರಗತ ಮಾಡಿಕೊಳ್ಳುವ ಬದಲು ಭವಿಷ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು.