ಹೈದರಾಬಾದ್: ಕೆಜಿಗಟ್ಟಲೆ ಚಿನ್ನ ಹಾಗೂ ಕೋಟ್ಯಂತರ ರೂ. ಇಟ್ಟುಕೊಂಡಿದ್ದ ಮಹಿಳೆಯನ್ನು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ)ದ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ದುಬೈನಿಂದ ಇಂದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆ ಬಳಿ 11.1 ಕೆಜಿ ವಿದೇಶಿ ಮಾರ್ಕ್ ಇರುವ ಚಿನ್ನ ಹಾಗೂ ಆಕೆ ತಂಗಿದ್ದ ಹೋಟೇಲ್ನಲ್ಲಿ ಸಿಂಗಪೂರ ಹಾಗೂ ಅರಬ್ ದೇಶದ 4,25,312 ದಿನಾರ್ ಪತ್ತೆಯಾಗಿದೆ. ಅಧಿಕಾರಿಗಳು ವಶಪಡಿಸಿಕೊಂಡಿರುವ ಚಿನ್ನದ ಮೊತ್ತ 3,63,52,500 ರೂ ಹಾಗೂ ವಿದೇಶಿ ಕರೆನ್ಸಿಯ ಭಾರತೀಯ ಮೊತ್ತ 1,50,64,012 ರೂ ಆಗಿದೆ ಎಂದು ತಿಳಿದುಬಂದಿದೆ.
ಇಷ್ಟೊಂದು ಮೊತ್ತದ ಚಿನ್ನವನ್ನು ಬಟ್ಟೆ ಹಾಗೂ ಸಾಕ್ಸ್ನಲ್ಲಿ ಈ ಮಹಿಳೆ ಇಟ್ಟುಕೊಂಡಿದ್ದಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಈಕೆ ಮಾಲು ಸಮೇತ ಸಿಕ್ಕಿಬಿದ್ದಿದ್ದಾಳೆ. ಇನ್ನು ಈಕೆ ಮೂರು ತಿಂಗಳಿಂದ ತಂಗಿದ್ದ ಪಂಚತಾರಾ ಹೋಟೇಲ್ನಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ.
ಕಸ್ಟಮ್ ಆಕ್ಟ್ 1962ರಂತೆ ಮಹಿಳೆಯಿಂದ ನಗ, ನಾಣ್ಯ ವಶಪಡಿಸಿಕೊಂಡಿರುವ ಅಧಿಕಾರಿಗಳು, ಆಕೆಯನ್ನು ಜೈಲಿಗೆ ತಳ್ಳಿದ್ದಾರೆ. ಈ ಸಂಬಂದ ಹೆಚ್ಚುವರಿ ತನಿಖೆ ನಡೆಯುತ್ತಿದೆ.